ISRO: ‘ಆಕಾಶವೇ ಮಿತಿಯಲ್ಲ’ ಎಂದು ಹುರಿದುಂಬಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಇಸ್ರೋ

ಚಂದ್ರಯಾನ 3 ಯಶಸ್ಸಿನ ಪಾಲುದಾರರಾದ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಅವರು ಹಾಡಿ ಹೊಗಳಿದ್ದಾರೆ. ಇದಕ್ಕೆ ಇಸ್ರೋ ಕೂಡ ಧನ್ಯವಾದ ತಿಳಿಸಿದೆ.

ಬೆಂಗಳೂರು : ಚಂದ್ರಯಾನ-3 ಉಪಗ್ರಹವನ್ನು ಚಂದ್ರನ ಮೇಲೆ ಇಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳ ಶ್ರಮ ಮತ್ತು ಸಾಹಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಡಿ ಹೊಗಳಿದರು.

ಅಲ್ಲದೇ, ಆಕಾಶವೇ ಮಿತಿಯಲ್ಲ, ಅದರಾಚೆಗೂ ನಾವಿದ್ದೇವೆ. ಅದನ್ನು ನೀವು ಸಾಧಿಸಿದ್ದೀರಿ ಎಂದು ಬಣ್ಣಿಸಿದರು. ಇದರಿಂದ ಪ್ರೇರಣೆ ಪಡೆದ ಇಸ್ರೋ ಸಂಸ್ಥೆಯು ಪ್ರಧಾನಿ ಮೋದಿ ಅವರಿಗೆ ವಿಶೇಷ ಧನ್ಯವಾದ ಹೇಳಿದೆ.

ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಬರೆದುಕೊಂಡಿರುವ ಇಸ್ರೋ, ವಿಜ್ಞಾನಿಗಳ ಶ್ರಮದ ಮೇಲಿನ ನಿಮ್ಮ ಅಚಲವಾದ ನಂಬಿಕೆ, ಮೆಚ್ಚುಗೆ, ಪ್ರೋತ್ಸಾಹಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲಾಗುವುದು. ನಿಮ್ಮ ಮಾತುಗಳು ರಾಷ್ಟ್ರದ ಅಭಿವೃದ್ಧಿ ಮತ್ತು ಹೆಚ್ಚಿನ ಸಾಧನೆಗಳಿಗೆ ಉತ್ತೇಜಿಸುತ್ತವೆ. ಮುಂದಿನ ಪ್ರಯತ್ನಗಳಿಗೆ ಇದು ಪ್ರೇರಕ ಎಂದು ಹೇಳಿದ್ದಾರೆ.

ಇಸ್ರೋ ಅಧ್ಯಕ್ಷ ಎಸ್​. ಸೋಮನಾಥ್​ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಚಂದ್ರಯಾನ-3 ಐತಿಹಾಸಿಕ ಘಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿ, ಭಾವುಕತೆ ವ್ಯಕ್ತಪಡಿಸಿದ್ದು ನಮಗೆ ಶಕ್ತಿ ತಂದಿದೆ. ಚಂದ್ರಯಾನ-2, ಚಂದ್ರಯಾನ-3 ಲ್ಯಾಂಡಿಂಗ್​ ಪ್ರದೇಶಗಳಿಗೆ ‘ತಿರಂಗಾ’ ಮತ್ತು ‘ಶಿವಶಕ್ತಿ’ ಎಂದು ಹೆಸರಿಟ್ಟಿದ್ದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ ಎಸ್ ಉನ್ನಿಕೃಷ್ಣನ್ ನಾಯರ್ ಮಾತನಾಡಿ, ಮುಂಬರುವ ಗಗನಯಾನ್​ ಮಿಷನ್​ಗೆ ತಯಾರಿ ನಡೆಸಲಾಗಿದೆ. ಪರೀಕ್ಷಾ ವಾಹನವನ್ನು ಬಳಸಿಕೊಂಡು ಎಸ್ಕೇಪ್ ಸಿಸ್ಟಮ್​ನ ಇನ್​ಫ್ಲೈಟ್ ಅಬಾರ್ಟ್ ಪರೀಕ್ಷೆಯನ್ನು ಮಾಡಲಿದ್ದೇವೆ. ಗಗನಯಾನ ಎಸ್ಕೇಪ್ ಸಿಸ್ಟಮ್ ಅತ್ಯಂತ ಪ್ರಮುಖ ಅಂಶವಾಗಿದೆ. ಆದ್ದರಿಂದ ವಿಭಿನ್ನ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲು ಬಯಸಿದ್ದೇವೆ. ಇದರ ಪರೀಕ್ಷೆಯನ್ನು ಅಕ್ಟೋಬರ್‌ನಲ್ಲಿ ಯೋಜಿಸಲಾಗಿದೆ. ಎಲ್ಲಾ ಕಾರ್ಯ ಚಟುವಟಿಕೆಗಳು ಸಾಗುತ್ತಿವೆ ಎಂದು ತಿಳಿಸಿದರು.

ಯಾವ್ಯಾವ ವಿಜ್ಞಾನಿಗಳು ಏನೆಂದರು?: ಇಸ್ರೋ ನಿಯಂತ್ರಣ ಕಚೇರಿಗೆ ಭೇಟಿ ನೀಡಿ ಹುರಿದುಂಬಿಸಿದ ಪ್ರಧಾನಿ ಮೋದಿ ಅವರ ಬಗ್ಗೆ ವಿಜ್ಞಾನಿಗಳು ಪ್ರತಿಕ್ರಿಯಿಸಿದ್ದು, ಎಲ್ಲರೂ ಇದೊಂದು ಅದ್ಭುತ ಪ್ರೇರಕ ಭಾಷಣ. ನಮ್ಮಲ್ಲಿ ಕೆಲಸ ಮಾಡುವ ಇನ್ನಷ್ಟು ಹುರುಪು ತುಂಬಿದೆ. ಮುಂದಿನ ಯೋಜನೆಗಳಲ್ಲಿ ನಮ್ಮನ್ನು ಸಮರ್ಪಿಸಿಕೊಳ್ಳುವ ಉತ್ಸಾಹ ತಂದಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಇಸ್ರೋದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಮಹಿಳಾ ವಿಜ್ಞಾನಿಗಳು ಪ್ರಧಾನಿ ಜೊತೆಗೆ ಸಂವಾದ ನಡೆಸಿದರು.

ಹಿರಿಯ ವಿಜ್ಞಾನಿ ಮತ್ತು ಪ್ರಜ್ಞಾನ್ ಮಾಡ್ಯೂಲ್‌ ತಂಡದ ಸದಸ್ಯೆ ರೀಮಾ ಘೋಷ್ ಮಾತನಾಡಿ, ಪ್ರಧಾನಿ ಮೋದಿ ಅವರು ನಮ್ಮನ್ನು ಭೇಟಿ ಮಾಡಿ ಬೆಂಬಲಿಸಿದರು. ಮಾನವನ ಸಾಧನೆಗಳಿಗೆ ಆಕಾಶ ಮಿತಿಯಲ್ಲ ಎಂದು ಹೇಳಿ, ನಮ್ಮ ಪ್ರಯತ್ನಗಳು ಮತ್ತು ಶ್ರಮವನ್ನು ಪ್ರಶಂಸಿಸಿದರು ಎಂದು ಖುಷಿ ಹಂಚಿಕೊಂಡರು.

ಮತ್ತೊಬ್ಬ ಹಿರಿಯ ವಿಜ್ಞಾನಿ ನಿಧಿ ಪೋರ್ವಾಲ್, ಕುಟುಂಬದ ಮುಖ್ಯಸ್ಥರು ಬಂದು ನಮ್ಮ ಕೆಲಸವನ್ನು ಮೆಚ್ಚಿದಾಗ ಆಗುವಂತಹ ಸಂತೋಷವೇ ಬೇರೆ. ಇಸ್ರೋದಲ್ಲಿ 20-25% ಮಹಿಳಾ ಶಕ್ತಿ ಹೊಂದಿದ್ದೇವೆ. ನಿಜವಾಗಿಯೂ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂದೆ ಬರಬೇಕು ಎಂದು ಹೇಳಿದರು.

ಮತ್ತೋರ್ವ ವಿಜ್ಞಾನಿ ರೆಡ್ಡಿ ಸರಿತಾ ಅವರು ಮಾತನಾಡಿ, ಪ್ರಧಾನಿ ಜೊತೆಗಿನ ಮಾತುಕತೆಯನ್ನು ಹಂಚಿಕೊಂಡರು. ನಾವು ತುಂಬಾ ಉತ್ಸಾಹದಲ್ಲಿದ್ದೇವೆ. ನಮ್ಮ ಸಾಧನೆಗಳನ್ನು ಹೊಗಳಿದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಕ್ಕೆ ಉತ್ಸುಕತೆ ಹೆಚ್ಚಿದೆ. ‘ನಾರಿ ಶಕ್ತಿ’ಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯದು ಎಂದರು.

Source : https://m.dailyhunt.in/news/india/kannada/etvbhar9348944527258-epaper-etvbhkn/isro+aakaashave+mitiyalla+endu+huridumbisidha+pradhaani+modige+dhanyavaadha+helidha+isro-newsid-n531840930?listname=newspaperLanding&topic=homenews&index=9&topicIndex=0&mode=pwa&action=click

Leave a Reply

Your email address will not be published. Required fields are marked *