ಪ್ಯಾಕೆಟ್ನೊಳಗೆ 1 ಬಿಸ್ಕೆಟ್ ಕಡಿಮೆ ನೀಡಿರುವುದು ಗ್ರಾಹಕರಿಗೆ ಕಂಪನಿ ಮಾಡಿದ ವಂಚನೆಯಾಗಿದೆ. ಇದು ತಪ್ಪು ಎಂದ ನ್ಯಾಯಾಲಯವು ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಐಟಿಸಿ ಕಂಪನಿಗೆ ಸೂಚಿಸಿದೆ.

ನವದೆಹಲಿ: ಬಿಸ್ಕೆಟ್ ಪ್ಯಾಕ್ನಲ್ಲಿ ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಕಡಿಮೆ ನೀಡಿದ ಐಟಿಸಿ ಕಂಪನಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಹೌದು, ಚೆನ್ನೈ ಮೂಲದ ಪಿ.ದಿಲ್ಲಿಬಾಬು ಎಂಬುವರು ತಾವು ಖರೀದಿಸಿದ ಪ್ಯಾಕ್ನಲ್ಲಿ ಒಂದೇ ಒಂದು ಬಿಸ್ಕೆಟ್ ಕಡಿಮೆ ಇದ್ದ ಕಾರಣ ಗ್ರಾಹಕ ನ್ಯಾಯಾಲಯದ ಮೆಟ್ಟಿಲು ಏರಿ ಜಯ ಗಳಿಸಿದ್ದಾರೆ.
ಪಿ.ದಿಲ್ಲಿಬಾಬು ಅವರು ಐಟಿಸಿ ಲಿಮಿಟೆಡ್ಗೆ ಸೇರಿದ ಸನ್ಫೀಸ್ಟ್ ಮಾರಿಲೈಟ್ ಬಿಸ್ಕೆಟ್ ಪ್ಯಾಕೆಟ್ ಖರೀದಿಸಿದ್ದರು. ಆದರೆ ಪ್ಯಾಕ್ ಮೇಲೆ ನಮೂದಿಸಿದ್ದ 16 ಬಿಸ್ಕೆಟ್ ಬದಲು ಅದರಲ್ಲಿ 15 ಬಿಸ್ಕೆಟ್ಗಳಿದ್ದವು. ಈ ಬಗ್ಗೆ ಅವರು ಸ್ಥಳೀಯ ಅಂಗಡಿಗೆ ಹೋಗಿ ವಿಚಾರಿಸಿದ್ದಾರೆ. ಕವರ್ ಮೇಲೆ ನಮೂದಿಸಿದಂತೆ 16 ಬಿಸ್ಕೆಟ್ ಏಕಿಲ್ಲ, ಒಂದು ಬಿಸ್ಕೆಟ್ ಏಕಿಲ್ಲವೆಂದು ಪ್ರಶ್ನಿಸಿದ್ದರು.
ಅಂಗಡಿಯವರು ನಮಗೆ ಈ ಬಗ್ಗೆ ಏನೂ ಗೊತ್ತಿಲ್ಲ, ನೀವು ಕಂಪನಿಯವರನ್ನೇ ಕೇಳಬೇಕು ಅಂತಾ ಹೇಳಿದ್ದಾರೆ. ತಮಗೆ ಎಲ್ಲೂ ಸಹ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದರಿಂದ ಸಿಟ್ಟಿಗೆದ್ದ ದಿಲ್ಲಿಬಾಬು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಐಟಿಸಿ ಪ್ರತಿದಿನವೂ 50 ಲಕ್ಷ ಪ್ಯಾಕೆಟ್ ಬಿಸ್ಕೆಟ್ಗಳನ್ನು ಉತ್ಪಾದಿಸುತ್ತದೆ. ಒಂದು ಬಿಸ್ಕೆಟ್ಗೆ 75 ಪೈಸೆ ಬೆಲೆ ಇದೆ. ಆದರೆ ಪ್ಯಾಕೆಟ್ನಲ್ಲಿ 16 ಬಿಸ್ಕೆಟ್ಗಳಿವೆ ಎಂದು ಹೇಳಿ ಕೇವಲ 15 ಬಿಸ್ಕೆಟ್ ನೀಡಲಾಗುತ್ತಿದೆ. ಈ ಮೂಲಕ ಐಟಿಸಿ ಕಂಪನಿ ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ಪ್ರತಿನಿತ್ಯ 29 ಲಕ್ಷ ರೂ. ವಂಚಿಸುತ್ತಿದೆ ಎಂದು ಹೇಳಿದ್ದರು.
ಈ ವೇಳೆ ಕೋರ್ಟ್ಗೆ ಹಾಜರಾದ ಐಟಿಸಿ ಕಂಪನಿ ಪರ ವಕೀಲರು ಬಿಸ್ಕೆಟ್ಗಳ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಎಷ್ಟು ತೂಕವಿದೆ ಎಂಬುದರ ಮೇಲೆ ಮಾರಾಟ ಮಾಡಲಾಗುತ್ತದೆ ಅಂತಾ ವಾದ ಮಂಡಿಸಿದ್ದರು. ಪ್ರತಿ ಸನ್ಫೀಸ್ಟ್ ಮಾರಿಲೈಟ್ ಪ್ಯಾಕೆಟ್ 76 ಗ್ರಾಂಗಳ ನಿವ್ವಳ ತೂಕವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಆದರೆ ನ್ಯಾಯಾಲಯದ ತನಿಖೆ ವೇಳೆ 74 ಗ್ರಾಂನ ಪ್ಯಾಕ್ನಲ್ಲಿ 15 ಬಿಸ್ಕೆಟ್ಗಳಿರುವುದು ಗೊತ್ತಾಗಿದೆ.
ಪ್ಯಾಕೆಟ್ನಲ್ಲಿ ಸ್ಪಷ್ಟವಾಗಿ 16 ಬಿಸ್ಕೆಟ್ಗಳಿರುವ ಬಗ್ಗೆ ಐಟಿಸಿ ಕಂಪನಿ ನಮೂದಿಸಿದೆ. ಹೀಗಾಗಿ ಪ್ಯಾಕೆಟ್ನೊಳಗೆ ಒಂದು ಬಿಸ್ಕೆಟ್ ಕಡಿಮೆ ನೀಡಿರುವುದು ಗ್ರಾಹಕರಿಗೆ ಕಂಪನಿ ಮಾಡಿದ ವಂಚನೆಯಾಗಿದೆ. ಇದು ತಪ್ಪು ಎಂದ ನ್ಯಾಯಾಲಯವು ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಐಟಿಸಿ ಕಂಪನಿಗೆ ಸೂಚಿಸಿದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii