ಏಷ್ಯನ್ ಗೇಮ್ಸ್ ಪುರುಷರ ವಾಲಿಬಾಲ್:​ ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿದ ಭಾರತ!

ಏಷ್ಯನ್ ​ಗೇಮ್ಸ್ ಪುರುಷರ ವಾಲಿಬಾಲ್​ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ ತಂಡ ಅಮೋಘ ಗೆಲುವು ಸಾಧಿಸಿತು.

ಹ್ಯಾಂಗ್​ಝೌ (ಚೀನಾ): ಬುಧವಾರ ನಡೆದ ಏಷ್ಯನ್​ ಗೇಮ್ಸ್‌ ವಾಲಿಬಾಲ್‌ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಹಾಲಿ ರನ್ನರ್‌ಅಪ್ ದಕ್ಷಿಣ ಕೊರಿಯಾವನ್ನು ಮಣಿಸಿ ನಾಕೌಟ್ ಹಂತ ಪ್ರವೇಶಿಸಿತು.

2 ಗಂಟೆ 38 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಎದುರಾಳಿ ತಂಡವನ್ನು ಸೋಲಿಸಿತು.

ವಾಲಿಬಾಲ್​ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 73ನೇ ಸ್ಥಾನದಲ್ಲಿರುವ ಭಾರತ, 27ನೇ ಶ್ರೇಯಾಂಕದಲ್ಲಿರುವ ಬಲಾಢ್ಯ ದಕ್ಷಿಣ ಕೋರಿಯಾ ವಿರುದ್ಧ 25-27, 29-27, 25-22, 20-25, 17-15 ಅಂತರಗಳಿಂದ ಗೆಲುವಿನ ಕೇಕೆ ಹಾಕಿತು. ಭಾರತದ ಪರ ಅಮಿತ್​ ಗುಲಿಯಾ ಮತ್ತು ಅಶ್ವಲ್​ ರೈ ಅದ್ಭುತ ಪ್ರದರ್ಶನ ತೋರಿ ಉತ್ತಮ ಅಂಕಗಳನ್ನು ಕಲೆಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ದಕ್ಷಿಣ ಕೊರಿಯಾ 1966 ರಿಂದ 2018ರ ವರೆಗಿನ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದುಕೊಂಡಿದೆ. 1978, 2002 ಮತ್ತು 2006ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಕೊರಿಯಾ, ಏಳು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದೆ. ಇಂತಹ ಬಲಿಷ್ಠ ತಂಡದ ವಿರುದ್ಧ ಭಾರತ ರೋಚಕ ಪೈಪೋಟಿ ನೀಡಿ ಗೆದ್ದು ಬೀಗಿ ಐತಿಹಾಸಿಕ ಸಾಧನೆ ತೋರಿತು.

ಕಾಂಬೋಡಿಯಾ ವಿರುದ್ಧವೂ ಗೆಲುವು: ಮಂಗಳವಾರ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಎದುರಾಳಿ ಕಾಂಬೋಡಿಯಾವನ್ನು 3-0 ಅಂತರದಿಂದ ಸೋಲಿಸಿತ್ತು. ಕೆಳ ಶ್ರೇಯಾಂಕ ಹೊಂದಿರುವ ಕಾಂಬೋಡಿಯಾ ತಂಡವನ್ನು 25-14, 25-13, 25-19 ಅಂತರದಿಂದ ಭಾರತ ಸುಲಭವಾಗಿ ಸೋಲಿಸಿತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕೊನೆಯದಾಗಿ 1986ರಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.

ಸ್ಕೋರ್​ ವಿವರ: ಮೊದಲ ಸೆಟ್‌ನಲ್ಲಿ 10-13 ರಿಂದ ಹಿನ್ನಡೆಯಲ್ಲಿದ್ದ ಭಾರತ ನಂತರ 19-19 ರಿಂದ ಸಮಬಲ ಸಾಧಿಸಿತು. ಕೊನೆಯಲ್ಲಿ ಎಡವಿದ ತಂಡ 25-27 ರಿಂದ ಸೆಟ್ ಕಳೆದುಕೊಂಡಿತು. ಎರಡನೇ ಸೆಟ್‌ನಲ್ಲಿ ಆರಂಭದಿಂದಲೇ ಮುನ್ನಡೆ ಸಾಧಿಸಿದ ಭಾರತ, 29-27ರಿಂದ ಸೆಟ್‌ ಗೆದ್ದುಕೊಂಡಿತು. ಮೂರನೇ ಸೆಟ್‌ನ ಆರಂಭದಿಂದಲೇ ಪ್ರಾಬಲ್ಯ ಮೆರೆದ ತಂಡ 25-22 ಅಂತರದಿಂದ ಜಯಿಸಿತು. ನಾಲ್ಕನೇ ಸೆಟ್‌ನಲ್ಲಿ ಕೊರಿಯಾ ಪೈಪೋಟಿ ನೀಡಿ 20-25ರಿಂದ ಗೆದ್ದುಕೊಂಡಿತು. ಐದನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ 8-6 ರಿಂದ ಮುಂದಿದ್ದ ಭಾರತ 12-12 ಸ್ಕೋರ್‌ನೊಂದಿಗೆ ಸಮಬಲ ಸಾಧಿಸಿತ್ತು. ಭಾರತ 14-12 ಅಂಕ ಗಳಿಸಿ ಎರಡು ಮ್ಯಾಚ್ ಪಾಯಿಂಟ್ ಪಡೆದುಕೊಂಡಿತು. ನಂತರ ಕೊರಿಯಾ ಪೈಪೋಟಿ ನೀಡಿ 14-15ರ ಮುನ್ನಡೆಯೊಂದಿಗೆ ಮ್ಯಾಚ್ ಪಾಯಿಂಟ್ ಭದ್ರಪಡಿಸಿಕೊಂಡಿತು. ಬಳಿಕ ಮಂಜುನಾಥ್ ಮನೋಜ್ ಅದ್ಭುತ ಸ್ಪೈಕ್ ಮೂಲಕ ಸಮಬಲ ಸಾಧಿಸಿದರು. ಅಂತಿಮವಾಗಿ ಐಶ್ವಾಲ್ ರೈ ಭಾರತಕ್ಕೆ 17-15 ಅಂಕಗಳಿಂದ ತಂಡಕ್ಕೆ ಗೆಲುವು ಒದಗಿಸಿಕೊಟ್ಟರು.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://m.dailyhunt.in/news/india/kannada/etvbhar9348944527258-epaper-etvbhkn/eshyan+gems+purushara+vaalibaal+balishtha+dakshina+koriya+manisidha+bhaarata+-newsid-n539664296?listname=newspaperLanding&topic=homenews&index=6&topicIndex=0&mode=pwa&action=click

Leave a Reply

Your email address will not be published. Required fields are marked *