ಗೂಗಲ್ ಆಡ್​ಸೆನ್ಸ್ ನಿಯಮ ಬದಲು; ‘ಪೇ ಪರ್ ಕ್ಲಿಕ್’ ಬದಲಿಗೆ ‘ಪೇ ಪರ್​ ಇಂಪ್ರೆಷನ್​’

Google AdSense: ಮುಂದಿನ ವರ್ಷದ ಆರಂಭದಿಂದ ಗೂಗಲ್ ಆಡ್​ಸೆನ್ಸ್​ ಹಣ ಸಂದಾಯ ನಿಯಮಗಳು ಬದಲಾಗಲಿವೆ.

ಸ್ಯಾನ್ ಫ್ರಾನ್ಸಿಸ್ಕೋ: ಜಗತ್ತಿನ ಖ್ಯಾತ ಜಾಹೀರಾತು ಪ್ಲಾಟ್ ಫಾರ್ಮ್ ಗೂಗಲ್ ಆಡ್ ಸೆನ್ಸ್ ಇನ್ನು ಮುಂದೆ ಪೇ-ಪರ್-ಕ್ಲಿಕ್ (pay-per-click) ನಿಂದ ಪೇ-ಪರ್-ಇಂಪ್ರೆಷನ್ (pay-per-impression) ಮಾದರಿಗೆ ಪರಿವರ್ತನೆಯಾಗಲಿದೆ ಎಂದು ಘೋಷಿಸಿದೆ.

ಅಂದರೆ ಬಳಕೆದಾರರು ಜಾಹೀರಾತನ್ನು ನೋಡಿದಾಗಲೆಲ್ಲ ಅದನ್ನು ಪ್ರದರ್ಶಿಸಿದ ಪ್ರಕಾಶಕರಿಗೆ ಆದಾಯ ಸಿಗಲಿದೆ. ಈ ಬದಲಾವಣೆಯು ಮುಂದಿನ ವರ್ಷದ ಆರಂಭದಿಂದ ಜಾರಿಗೆ ಬರಬಹುದು ಎಂದು ಕಂಪನಿ ನಿರೀಕ್ಷಿಸಿದ್ದು, ಈ ಬದಲಾವಣೆಗಳಿಗೆ ಪ್ರಕಾಶಕರು ತಮ್ಮ ಕಡೆಯಿಂದ ಯಾವುದೇ ವಿಶೇಷ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಗೂಗಲ್ ಹೇಳಿದೆ.

“ಆಡ್​ ಸೆನ್ಸ್ ನಲ್ಲಿ ಈವರೆಗೆ ಇದ್ದ ಪ್ರತಿ ಕ್ಲಿಕ್​ಗೆ ಪ್ರಕಾಶಕರಿಗೆ ಹಣ ಪಾವತಿಸುವ ಮಾದರಿಯು ಪ್ರತಿ ಇಂಪ್ರೆಷನ್​ಗೆ ಹಣ ಪಾವತಿಸುವ ಮಾದರಿಗೆ ಶೀಘ್ರದಲ್ಲೇ ಬದಲಾಗಲಿದೆ” ಎಂದು ಗೂಗಲ್ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದೆ. “ಈ ಬದಲಾವಣೆಯು ಗೂಗಲ್​ನ ಉತ್ಪನ್ನಗಳು ಮತ್ತು ಥರ್ಡ್​ ಪಾರ್ಟಿ ಪ್ಲಾಟ್​ಫಾರ್ಮ್​ಗಳಲ್ಲಿ ತಮ್ಮ ಆಡ್​ ಸ್ಪೇಸ್​ಗಳಿಗಾಗಿ ಪ್ರಕಾಶಕರಿಗೆ ಹೆಚ್ಚು ಏಕರೂಪದಲ್ಲಿ ಹಣ ಪಾವತಿಸಲು ಮತ್ತು ಅವರು ಬಳಸುವ ಇತರ ತಂತ್ರಜ್ಞಾನ ಪೂರೈಕೆದಾರರೊಂದಿಗೆ ಹೋಲಿಸಲು ಸಹಾಯ ಮಾಡುತ್ತದೆ” ಎಂದು ಅದು ಹೇಳಿದೆ.

ಹೊಸ ಬದಲಾವಣೆಯು ಪ್ರಕಾಶಕರು ತಮ್ಮ ವೆಬ್​ಸೈಟ್​ಗಳಲ್ಲಿ ಪ್ರದರ್ಶಿಸಬಹುದಾದ ಜಾಹೀರಾತುಗಳ ಪ್ರಕಾರ ಅಥವಾ ಪ್ರಮಾಣದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಗೂಗಲ್ ಹೇಳಿದೆ. ಪ್ರಕಾಶಕರು ಹಣಗಳಿಸಲು ಬಳಸುವ ವಿವಿಧ ತಂತ್ರಜ್ಞಾನಗಳಾದ್ಯಂತ ವಿಭಿನ್ನ ಶುಲ್ಕಗಳನ್ನು ಹೋಲಿಸಲು ಸ್ಥಿರವಾದ ಮಾರ್ಗವನ್ನು ಒದಗಿಸಲು ಗೂಗಲ್ ಆಡ್​ಸೆನ್ಸ್​ ಆದಾಯ-ಹಂಚಿಕೆ ರಚನೆಯನ್ನು ನವೀಕರಿಸಿದೆ.

ಈ ಹಿಂದೆ, ಗೂಗಲ್ ಆಡ್​ಸೆನ್ಸ್​ ನೆಟ್​ವರ್ಕ್ ಒಂದೇ ವಹಿವಾಟಿನಲ್ಲಿ ಶುಲ್ಕವನ್ನು ಪ್ರಕ್ರಿಯೆಗೊಳಿಸುತ್ತಿತ್ತು. ಆದರೆ ಕಂಪನಿಯು ಈಗ ಆಡ್​ಸೆನ್ಸ್​ ಆದಾಯದ ಪಾಲನ್ನು ಖರೀದಿ-ಬದಿ (buy-side) ಮತ್ತು ಮಾರಾಟ-ಬದಿಗೆ (sell-side) ಪ್ರತ್ಯೇಕ ದರಗಳಾಗಿ ವಿಂಗಡಿಸುತ್ತಿದೆ.

“ಹೊಸ ನಿಯಮದ ಪ್ರಕಾರ ಯಾವುದೇ ಕಂಟೆಂಟ್​ನಲ್ಲಿ ಆಡ್​ಸೆನ್ಸ್​ ನೊಂದಿಗೆ ಜಾಹೀರಾತು ಪ್ರದರ್ಶಿಸಿದಾಗ ಜಾಹೀರಾತು ಪ್ಲಾಟ್​ಫಾರ್ಮ್​ ತನ್ನ ಶುಲ್ಕವನ್ನು ತೆಗೆದುಕೊಂಡ ನಂತರ ಪ್ರಕಾಶಕರು ಶೇಕಡಾ 80 ರಷ್ಟು ಆದಾಯ ಪಡೆಯಲಿದ್ದಾರೆ. ಇದು ಖರೀದಿ-ಬದಿ ಅಥವಾ ಥರ್ಡ್​ ಪಾರ್ಟಿ ಪ್ಲಾಟ್​ಫಾರ್ಮ್ ಆಗಿರಬಹುದು ” ಎಂದು ಕಂಪನಿ ತಿಳಿಸಿದೆ. ಉದಾಹರಣೆಗೆ, ಗೂಗಲ್​ ಆಡ್​ಸೆನ್ಸ್​ ಜಾಹೀರಾತು ತೋರಿಸಿದಾಗ, ಜಾಹೀರಾತುದಾರರು ನೀಡುವ ಹಣದಲ್ಲಿ ಸರಾಸರಿ ಶೇ 15ರಷ್ಟು ಮೊತ್ತವನ್ನು ಗೂಗಲ್ ಆಡ್​ಸೆನ್ಸ್​ ತಾನು ಉಳಿಸಿಕೊಳ್ಳಲಿದೆ.

ಒಟ್ಟಾರೆಯಾಗಿ ನೋಡಿದರೆ ವೆಬ್​ಸೈಟ್​ಗಳು ಆದಾಯದ ಸುಮಾರು ಶೇ 68ರಷ್ಟು ಪಾಲು ಪಡೆಯುವುದನ್ನು ಮುಂದುವರಿಸಲಿವೆ. ಜಾಹೀರಾತುದಾರರು ಆಡ್​ಸೆನ್ಸ್​ನಲ್ಲಿ ಜಾಹೀರಾತು ತೋರಿಸಲು ಥರ್ಡ್​ಪಾರ್ಟಿ ಪ್ಲಾಟ್​ಫಾರ್ಮ್ ಬಳಸಿದಲ್ಲಿ ಥರ್ಡ್-ಪಾರ್ಟಿ ಪ್ಲಾಟ್​ಫಾರ್ಮ್ ತನ್ನ ಶುಲ್ಕವನ್ನು ತೆಗೆದುಕೊಂಡ ನಂತರ ಪ್ರಕಾಶಕರು ಶೇಕಡಾ 80 ರಷ್ಟು ಆದಾಯವನ್ನು ಪಡೆಯುತ್ತಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/gugal+aad+sens+niyama+badalu+pe+par+klik+badalige+pe+par+impreshan+-newsid-n553827786?listname=newspaperLanding&topic=homenews&index=3&topicIndex=0&mode=pwa&action=click

Leave a Reply

Your email address will not be published. Required fields are marked *