ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕ, ರದ್ದು ಮಾಡಿದ್ದು ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ.

SC judgement on abrogation of J&K: 370ನೇ ವಿಧಿ ರದ್ದನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್​, 2024 ರ ಸೆಪ್ಟೆಂಬರ್​ 30 ರೊಳಗೆ ಚುನಾವಣೆ ನಡೆಸಿ ಎಂದು ಸಲಹೆ ನೀಡಿದೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ಆರ್ಟಿಕಲ್​ ಅನ್ನು ತೆಗೆದು ಹಾಕಿದ್ದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ.

ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕವಾಗಿದೆ. ಕಣಿವೆಯಲ್ಲಿನ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾಡಿಕೊಂಡಿದ್ದ ಮಧ್ಯಂತರ ವ್ಯವಸ್ಥೆಯಾಗಿತ್ತು. ಅದನ್ನು ರದ್ದು ಮಾಡಿರುವುದು ತಪ್ಪಲ್ಲ ಎಂದು ಸುಪ್ರೀಂಕೋರ್ಟ್​ ತನ್ನ ಆದೇಶದಲ್ಲಿ ತಿಳಿಸಿದೆ.

https://pbs.twimg.com/media/GBC8Gi2agAAqiAv?format=jpg&name=small

ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾದ ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ದೇಶದ ಸಂವಿಧಾನದ ಎಲ್ಲಾ ನಿಬಂಧನೆಗಳು ಅಲ್ಲಿಗೂ ಅನ್ವಯಿಸುತ್ತವೆ. ಸಂವಿಧಾನದ 370 ನೇ ವಿಧಿ ತಾತ್ಕಾಲಿಕ ವ್ಯವಸ್ಥೆಯಾಗಿದ್ದ ಕಾರಣ, ಅದನ್ನು ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಅನ್ನು ಬೇರ್ಪಡಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ನಿರ್ಧಾರವೂ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಮ್ಮು ಮತ್ತು ಕಾಶ್ಮೀರವು ಅಖಂಡ ಭಾರತದ ಅವಿಭಾಜ್ಯ ಅಂಗವಾಗಿದೆ. ಇದು ಸಂವಿಧಾನದ 1ನೇ ಮತ್ತು 370 ನೇ ವಿಧಿಯಿಂದ ವಿಧಿತವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಆಡಳಿತ ಶಾಶ್ವತ ಸಂಸ್ಥೆಯಾಗಲು ಎಂದಿಗೂ ಉದ್ದೇಶಿಸಿರಲಿಲ್ಲ ಎಂದು ಕೋರ್ಟ್​ ವಿವರಿಸಿತು.

ರಾಷ್ಟ್ರಪತಿಗಿದೆ ವಾಪಸ್​ ಪಡೆಯುವ ಪೂರ್ಣಾಧಿಕಾರ: 370 ನೇ ವಿಧಿಯನ್ನು ರದ್ದುಗೊಳಿಸುವ ಅಧಿಕಾರವನ್ನು ರಾಷ್ಟ್ರಪತಿಗಳು ಹೊಂದಿದ್ದಾರೆ. ಇದಕ್ಕಾಗಿ ಮೊದಲು ಸಾಂವಿಧಾನಿಕ ಶಿಫಾರಸು ಅಗತ್ಯವಿಲ್ಲ. ಜೊತೆಗೆ ರಾಷ್ಟ್ರಪತಿಗಳು ರಾಜ್ಯ ವಿಧಾನಸಭೆಗಳ ಒಪ್ಪಿಗೆ ಪಡೆಯುವ ಅಗತ್ಯವೂ ಇಲ್ಲ. ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ರಾಷ್ಟ್ರಪತಿಗಳು ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಅನ್ವಯಿಸಬಹುದು. ರಾಷ್ಟ್ರಪತಿಗಳ ನಿರ್ಧಾರದ ಮೇಲೆ ಕೋರ್ಟ್​ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ.

ಮುಂದಿನ ವರ್ಷ ಚುನಾವಣೆ ನಡೆಸಿ: ಜಮ್ಮು ಮತ್ತು ಕಾಶ್ಮೀರ, ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಿರ್ಧಾರವೂ ಸಿಂಧುವಾಗಿದೆ. 2024ರ ಸೆಪ್ಟೆಂಬರ್ 30 ರೊಳಗೆ ಅಲ್ಲಿನ ವಿಧಾನಸಭೆಗೆ ಕಡ್ಡಾಯವಾಗಿ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು. ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರ ಇಚ್ಛಾಶಕ್ತಿ ಹೊಂದಿದೆ. ಸಾಧ್ಯವಾದಷ್ಟು ಬೇಗ ರಾಜ್ಯತ್ವವನ್ನು ನೀಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪೀಠದಲ್ಲಿದ್ದ ನ್ಯಾಯಮೂರ್ತಿಗಳು: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಅವರು ಸಾಂವಿಧಾನಿಕ ಪೀಠದಲ್ಲಿದ್ದರು. ನ್ಯಾ. ಎಸ್​ಕೆ ಕೌಲ್​, ಸಂಜೀವ್​ ಖನ್ನಾ ಅವರು ತಮ್ಮ ತೀರ್ಪುಗಳನ್ನು ಪ್ರತ್ಯೇಕವಾಗಿ ಬರೆದಿದ್ದರೆ, ಉಳಿದವರು ಒಂದೇ ತೀರ್ಪು ಪ್ರಕಟಿಸಿದ್ದಾರೆ. 370 ನೇ ವಿಧಿಯನ್ನು ರದ್ದು ಮಾಡಿದ್ದರ ವಿರುದ್ಧ ಸಲ್ಲಿಸಲಾದ 23 ಅರ್ಜಿಗಳನ್ನು ಸುಪ್ರೀಂಕೋರ್ಟ್​ನ ಪಂಚ ಸದಸ್ಯ ಪೀಠ 16 ದಿನಗಳ ಸತತ ವಿಚಾರಣೆಯ ನಂತರ ಸೆಪ್ಟೆಂಬರ್ 5 ರಂದು ತೀರ್ಪು ಕಾಯ್ದಿರಿಸಿತ್ತು.

Source : https://m.dailyhunt.in/news/india/kannada/etvbhar9348944527258-epaper-etvbhkn/kaashmirakkiddha+vishesha+sthaanamaanave+taatkaalika+raddu+maadiddu+tappalla+kendradha+nirdhaara+ettihididha+suprim-newsid-n564243600?listname=newspaperLanding&topic=homenews&index=9&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *