ಅಮೇರಿಕಾ ಮತ್ತು ಚೀನಾದ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಭಾರತೀಯ ಸ್ಟಾರ್ಟ್‌ಅಪ್‌ಗಳು ಪ್ರತಿದಿನ ಹೊಸ ಎತ್ತರವನ್ನು ಮುಟ್ಟುತ್ತಿದ್ದು ಕೆಲವು ಗಡಿಯಾಚೆಗೂ ಬೆಳೆದು ನಿಂತಿದೆ.ದೇಶದಲ್ಲಿ ಇಂಟರ್‌ನೆಟ್ ಅಲೆಯ ನಂತರ ನಂತರ ಅನೇಕ ಇಂಜಿನಿಯರ್‌ಗಳ ಸಮೂಹವು, ಮತ್ತು ಇತರರೂ ಕೂಡಾ ಇಂದು ಪ್ರಾಬಲ್ಯ ಹೊಂದಿರುವ ಕಂಪನಿಗಳನ್ನು ಪ್ರಾರಂಭಿಸಿದ್ದಾರೆ.

ಈ ಪೈಕಿ ತನ್ನ ವಿಭಾಗದಲ್ಲಿ ರೆಡ್‌ಬಸ್ ಮುಂಚೂಣಿಯಲ್ಲಿರುವಂತಹ ಹೆಸರು. 2006 ರಲ್ಲಿ ಫಣೀಂದ್ರ ಸಮಾ, ಸುಧಾಕರ್ ಪಸುಪುನೂರಿ ಮತ್ತು ಚರಣ್ ಪದ್ಮರಾಜು ಸ್ಥಾಪಿಸಿದ “ರೆಡ್‌ಬಸ್” ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಸೇವೆಯಾಗಿದೆ. ಈ ಮೂವರು ಸಂಸ್ಥಾಪಕರು ತಾವು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಪದವಿ ಪಡೆಯುವಾಗ ಸ್ನೇಹಿತರಾಗಿದ್ದರು.ತಮ್ಮ ಸ್ವಂತ ಕಂಪನಿ ಸ್ಥಾಪಿಸುವ ಮೊದಲು ಅವರು ವಿವಿಧ ಸಂಸ್ಥೆಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
ವಿಶೇಷ ಅಂದರೆ ಈ ಮೂವರು ಕೇವಲ 5 ಲಕ್ಷ ರೂಪಾಯಿ ಬಂಡವಾಳ ಹಾಕಿ ಕಂಪನಿಯನ್ನು ಸ್ಥಾಪಿಸಿದ್ದು ಆದರೆ ವರದಿಗಳ ಪ್ರಕಾರ ಇಂದು ರೆಡ್‌ಬಸ್ ಪ್ರಸ್ತುತ 6985 ಕೋಟಿ ರೂಪಾಯಿಗಳಿಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದೆ. 2006ರಲ್ಲಿ ಹಬ್ಬ ಹರಿದಿನಗಳಲ್ಲಿ ತಮ್ಮ ಊರಿಗೆ ಬಸ್ ಟಿಕೆಟ್ ಕಾಯ್ದಿರಿಸಲು ಫಣೀಂದ್ರ ಸಾಮ ಅವರು ಹರಸಾಹಸ ಪಡುತ್ತಿದ್ದಾಗ ಈ ಸೇವೆ ಆರಂಭಿಸುವ ಆಲೋಚನೆ ಹುಟ್ಟಿಕೊಂಡಿತು. ಈ ವಿಚಾರದ ಬಗ್ಗೆ ತಮ ಸ್ನೇಹಿತರ ಸಹಾಯದಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣವನ್ನು ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆ. ತಿಂಗಳುಗಳ ನಂತರ ಚಿಕ್ಕದಾಗಿ ಆರಂಭವಾದ ಆನ್ ಲೈನ್ ಬುಕ್ಕಿಂಗ್ ಸಂಸ್ಥೆ ಮುಂದೆ ಬೃಹದಾಕಾರವಾಗಿ ಬೆಳೆಯಿತು.
ಫಣೀಂದ್ರ ಸಾಮಾ ಅವರ ನಾಯಕತ್ವದಲ್ಲಿ, ರೆಡ್‌ಬಸ್ ಭಾರತದಲ್ಲಿ ಬಸ್ ಟಿಕೆಟಿಂಗ್ ಪ್ರಕ್ರಿಯೆಯನ್ನು ಸುಲಭ, ಹೆಚ್ಚು ಪಾರದರ್ಶಕ ಒದಗಿಸುವ ಮೂಲಕ ಕ್ರಾಂತಿಕಾರವಾಗಿ ಬದಲಾಯಿಸಿತು. ಉದ್ಯಮಶೀಲತೆಯತ್ತ ಪ್ರಯಾಣಿಸುವ ಮೊದಲು ಸಾಮಾ ಅವರು, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್‌ನಲ್ಲಿ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳ ಡಿಸೈನರ್ ಆಗಿ ಕೆಲಸ ಮಾಡಿದ್ದರು. 2007 ರಲ್ಲಿ, ರೆಡ್‌ಬಸ್ ತನ್ನ ಮೊದಲ ಸುತ್ತಿನ 1 ಮಿಲಿಯನ್ ಡಾಲರ್ ನಿಧಿ ಪಡೆದುಕೊಳ್ಳುವಲ್ಲಿ ಸಫಲವಾಯಿತು.
ದೇಶದ ಕೆಲವು ದೊಡ್ಡ ದೊಡ್ಡ ಹೂಡಿಕೆದಾರರ ಬೆಂಬಲದೊಂದಿಗೆ, ರೆಡ್‌ಬಸ್ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಯ ಲೀಡರ್ ಆಯಿತು.2013 ರಲ್ಲಿ, ರೆಡ್‌ಬಸ್ ಅನ್ನು ದಕ್ಷಿಣ ಆಫ್ರಿಕಾದ ನಾಸ್ಪರ್ಸ್ ಮತ್ತು ಚೀನಾದ ಟೆನ್‌ಸೆಂಟ್‌ನ ಜಂಟಿ ಉದ್ಯಮವಾದ ಐಬಿಬೋ ಗ್ರೂಪ್ ಸ್ವಾಧೀನಪಡಿಸಿಕೊಂಡಿತು. ಆ ವೇಳೆ ಭಾರತೀಯ ಆರಂಭಿಕ ಸ್ಟಾರ್ಟ್ ಆಪ್ ವ್ಯವಸ್ಥೆಯಲ್ಲಿನ ಅತಿದೊಡ್ಡ ಸಾಗರೋತ್ತರ ವ್ಯವಹಾರಗಳಲ್ಲಿ ಒಂದಾಗಿದೆ. ರೆಡ್‌ಬಸ್ ಅನ್ನು 828 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ.