
ಬೆಂಗಳೂರು, ಫೆಬ್ರವರಿ 28: ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಿದ್ದು, ಮಳೆಗಾಲದ ಮೂರ್ನಾಲ್ಕು ಪ್ರವಾಹ ಪರಿಸ್ಥಿತಿಯನ್ನು ಎದುರಿಸಬೇಕಿತ್ತು. ಪರಿಣಾಮ ಮುಂದಿನ ವರ್ಷದ ಮಳೆಗಾಲದ ವರೆಗೆ ನೀರಿನ ಕೊರತೆ ಎದುರಾಗಿರಲಿಲ್ಲ. ಕೆಲವೇ ಕೆಲವು ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿತಷ್ಟೇ.
ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನೀರಿನ ಕೊರತೆ ಉಂಟಾಗಿದೆ. ಬೋರ್ವೆಲ್ಗಳು, ಕೊಳ, ಕೆರೆ, ಬಾವಿ, ನದಿಗಳು ಬರಿದಾಗುತ್ತಿದ್ದು, ಜನ ಜೀವ ಜಲಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಹತ್ತಾರು ಕಿಲೋ ಮೀಟರ್ ನಡೆದುಕೊಂಡು ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ.
ರಾಜ್ಯದ ಶೇಕಡಾ ಮೂವತ್ತರಷ್ಟು ಜನರು ವಾಸವಾಗಿರುವ ಬೆಂಗಳೂರಿನಲ್ಲಿ ಇದೀಗ ನೀರಿನ ಅಭಾವ ಉಂಟಾಗಿದೆ. ಈ ಬಾರಿಯ ಬಿರು ಬಿಸಿಲಿಗೆ ಸಿಲಿಕಾನ್ ಸಿಟಿಯ ಜನ ತತ್ತರಿಸುತ್ತಿದ್ದು, ಜೊತೆಗೆ ನಗರದಲ್ಲಿ ನೀರಿಗಾಗಿ ಹಾಹಾಕಾರ ಕೂಡ ಉಂಟಾಗಿದೆ. ಬೇಸಿಗೆಯ ಆರಂಭದಲ್ಲೇ ಕೊಳವೆಬಾವಿಗಳು ಬತ್ತಿ ಹೋಗಿ ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದು, ಮುಂದಿನ ದಿನಗಳಲ್ಲಿ ಹೇಗೆ ಎನ್ನುವ ಪ್ರಶ್ನೆ ಸಿಲಿಕಾನ್ ಸಿಟಿಯ ಜನರ ಮುಂದಿದೆ. ಕೋಟ್ಯಂತರ ಜನರು ವಾಸಿಸುತ್ತಿರುವ ಬೆಂಗಳೂರಿನಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಬರಗಾಲದ ಸಮಸ್ಯೆ ಎದುರಾಗುತ್ತಿದೆ. ಒಂದೆಡೆ ಕೊಳವೆ ಬಾವಿಗಳು ಬತ್ತಿ ನೀರಿಲ್ಲದಂತಾದರೆ, ಮತ್ತೊಂದೆಡೆ ಝಳ ಬಿಸಿಲು ಸುಡುತ್ತಿದೆ.
ಹೀಗಾಗಿ ಜನರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ.ಸದ್ಯ ಬೆಂಗಳೂರಿನ ಜನರ ಆರ್ಥಿಕ ಹೊರೆಗೆ ನೀರು ಖರೀದಿ ಕೂಡ ಸೇರಿದ್ದು, ನಗರದಲ್ಲಿ ಟ್ಯಾಂಟಕರ್ ನೀರಿನ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಗರದ ಕೆಲವು ಭಾಗಗಳಲ್ಲಿ 1,000 ಲೀಟರ್ ನೀರಿನ ದರ 238 ರೂಪಾಯಿ ದಾಟಿದ್ದು, ಇದರ ಅರ್ಥ ತಿಂಗಳ ಹಿಂದೆ 1,500 ರೂಪಾಯಿಗಿಂತ ಕಡಿಮೆ ಬೆಲೆಯಿದ್ದ 12,000 ಲೀಟರ್ ನೀರಿನ ಟ್ಯಾಂಕರ್ ಈಗ 2,850 ರೂಪಾಯಿಯಾಗಿದೆ. ಬೆಂಗಳೂರಿನ ಜನರು ಬೇರೆ ದಾರಿ ಇಲ್ಲದೇ ನೀರು ಸರಬರಾಜು ಮಾಡುವವರು ಹೇಳುವ ದುಬಾರಿ ದರ ನೀಡಿ ನೀರು ಖರೀದಿಸುತ್ತಿದ್ದಾರೆ. ದಿನ ಬಳಕೆಯ ನೀರಿನ ಕಥೆ ಇದಾದರೆ, ಕುಡಿಯುವ ನೀರಿನ ಕಥೆ ಮತ್ತೊಂದಾಗಿದೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಒಂದು ಏರಿಯಾದಲ್ಲಿ ಕನಿಷ್ಟ ಎರಡು ಕಡೆಗಳಲ್ಲಿ ರಿವರ್ಸ್ ಆಸ್ಮೋಸಿಸ್ (ಆರ್ಒ) ಘಟಕಗಳನ್ನು ತೆರೆಯಲಾಗಿತ್ತು. ಜನ ಐದು ರೂಪಾಯಿಗೆ ಇಪ್ಪತ್ತು ಲೀಟರ್ ನೀರು ಖರೀದಿಸುತ್ತಿದ್ದರು. ಇದು ಸಣ್ಣ ಹೋಟೆಲ್ಗಳು, ಚಾಟ್ಸ್ ಸೆಂಟರ್ಗಳು, ಬೀದಿಬದಿ ವ್ಯಾಪರಿಗಳು ಸೇರಿಂದತೆ, ಮನೆಯಲ್ಲಿ ನೀರು ಶುದ್ಧೀಕರಣ ಯಂತ್ರ(Water Purifier)ಗಳನ್ನು ಹೊಂದಲು ಸಾಧ್ಯವಾಗದ ಅನೇಕರಿಗೆ ಉಪಯೋಗವಾಗಿತ್ತು. ಆದರೆ ಬೋರ್ವೆಲ್ಗಳು ಬರಿದಾಗಿದ್ದು, ಬಹುತೇಕ ಆರ್ಒ ಘಟಕಗಳನ್ನು ಮುಚ್ಚಲಾಗಿದೆ.
ಹಾಗೂ ಕೆಲವು ಕಡೆ ನೀರಿನ ದರ ಏರಿಕೆ ಮಾಡಲಾಗಿದೆ. ಈ ರೀತಿ ಬೆಂಗಳೂರಿನಲ್ಲಿ ನೀರಿನ ಕೊರೆತೆಯ ಒಂದೊಂದೆ ಮುಖಗಳು ತೆರೆಯುತ್ತಿದೆ.ಮಂಗಳೂರಿನಲ್ಲಿ ಮೀನಿಲ್ಲ..!ಈ ಬಾರಿಯ ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ನೀರಿನ ಬರ ಮಾತ್ರವಲ್ಲದೆ, ಅಗಾಧವಾದ ಸಮುದ್ರದಲ್ಲಿ ಮತ್ಸ್ಯ ಕೂಡ ಬರ ಎದುರಾಗಿದೆ. ಈ ವೇಳೆ ಮೀನುಗಾರಿಕೆಗೆ ತೆರಳ ಬೇಕಿದ್ದ ನೂರಾರು ಬೋಟುಗಳು ಈಗಲೇ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿರುವ ಮೀನುಗಾರರು ಬರಿಗೈಯಲ್ಲಿ ಮರಳುತ್ತಿದ್ದಾರೆ.
ಕಡಲಾಳದಲ್ಲಿ ಮತ್ಸ್ಯಕ್ಷಾಮ ಹೆಚ್ಚಾಗಿದೆ. ಹೀಗಾಗಿ ಮೀನುಗಾರರು ನಿರೀಕ್ಷಿಸಿದ ಲಾಭ ಇರಲಿ, ಖುರ್ಚುಗಳನ್ನು ಸಮದೂಗಿಸಲು ಪರದಾಡುವಂತಾಗಿದೆ. ಕರ್ನಾಟಕ ಕರಾವಳಿಯಲ್ಲಿ ಕೇರಳ ಹಾಗೂ ತಮಿಳುನಾಡಿನ ಮೀನುಗಾರಿಕಾ ಬೋಟ್ಗಳು ನಿಷೇಧಿತ ಲೈಟ್ ಫಿಶಿಂಗ್, ಬುಲ್ ಟ್ರಾಲ್ ಫಿಶಿಂಗ್ ನಡೆಸುತ್ತಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1