IND vs ENG: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾಕ್ಕೆ ಜಯ, 4-1 ಅಂತರದಿಂದ ಸರಣಿ ವಶ.

India vs England, 5th Test: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ, ಉಳಿದ ನಾಲ್ಕು ಪಂದ್ಯಗಳಲ್ಲಿ ಆಂಗ್ಲರನ್ನು ಬಗ್ಗು ಬಡಿದು ಸರಣಿ ವಶಪಡಿಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ (Team India) ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಝಾಕ್ ಕ್ರಾಲಿ (79) ಅರ್ಧಶತಕ ಬಾರಿಸಿ ಮಿಂಚಿದ್ದರು.

ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಕುಲ್ದೀಪ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಸ್ಪಿನ್ ದಾಳಿಗೆ ಕ್ರೀಸ್​ ಕಚ್ಚಿ ನಿಲ್ಲಲು ಪರದಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 218 ರನ್​ಗಳಿಸಲಷ್ಟೇ ಶಕ್ತರಾದರು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿದರೆ, ಅಶ್ವಿನ್ 4 ವಿಕೆಟ್ ಪಡೆದರು.

ಇಂಗ್ಲೆಂಡ್ ಆಲೌಟ್ ಆದ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 104 ರನ್ ಪೇರಿಸಿ ಜೈಸ್ವಾಲ್ (57) ಔಟಾದರು. ಇನ್ನು ರೋಹಿತ್ ಶರ್ಮಾ (103) ಹಾಗೂ ಶುಭ್​ಮನ್ ಗಿಲ್ (110) ಭರ್ಜರಿ ಶತಕ ಸಿಡಿಸಿದರು.

ಆ ಬಳಿಕ ಬಂದ ದೇವದತ್ ಪಡಿಕ್ಕಲ್ (65) ಹಾಗೂ ಸರ್ಫರಾಝ್ ಖಾನ್ (56) ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ 2ನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಸ್ಕೋರ್ 450 ರನ್​ಗಳ ಗಡಿ ದಾಟಿತು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಕುಲ್ದೀಪ್ ಯಾದವ್ (30) ಹಾಗೂ ಜಸ್​ಪ್ರೀತ್ ಬುಮ್ರಾ 20 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 477 ರನ್ ಕಲೆಹಾಕಿ ಟೀಮ್ ಇಂಡಿಯಾ 259 ರನ್​ಗಳ ಮುನ್ನಡೆ ಪಡೆಯಿತು.

 ದ್ವಿತೀಯ ಇನಿಂಗ್ಸ್​:

259 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು. ಪರಿಣಾಮ 103 ರನ್​ ಕಲೆಹಾಕುವಷ್ಟರಲ್ಲಿ ಇಂಗ್ಲೆಂಡ್ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತು ಆಡಿದ ಜೋ ರೂಟ್ (84) ಅರ್ಧಶತಕ ಬಾರಿಸಿ ಮಿಂಚಿದರು.

ಆದರೆ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ ತಂಡವು 195 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನಿಂಗ್ಸ್ ಹಾಗೂ 64 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಭರ್ಜರಿ ಗೆಲುವಿನ ಮೂಲಕ ಐದು ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 4-1 ಅಂತರದಿಂದ ಗೆದ್ದುಕೊಂಡಿದೆ. ಟೀಮ್ ಇಂಡಿಯಾ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಅಶ್ವಿನ್ 5 ವಿಕೆಟ್ ಕಬಳಿಸಿದರೆ, ಜಸ್​ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *