ಕೆಇಎ ಪ್ರಕಟಿಸಿದ ಕರ್ನಾಟಕ ಸಿಇಟಿ ಫಲಿತಾಂಶದ ಆಧಾರದಲ್ಲಿ 2,15,595 ಎಂಜಿನಿಯರಿಂಗ್ 2,15,96 ಬಿ.ಎಸ್ಸಿ (ಕೃಷಿ), 2,19,887 ಅಭ್ಯಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.
![](https://samagrasuddi.co.in/wp-content/uploads/2024/06/image-4.png)
ಬೆಂಗಳೂರು (ಜೂ.01): ರಾಜ್ಯದಲ್ಲಿ ಇಂಜಿನಿಯರಿಂಗ್ ಸೇರಿದಂತೆ ನಾನಾ ವೃತ್ತಿಪರ ಕೋರ್ಸುಗಳಿಗೆ ಏ.18 ಮತ್ತು 19ರಂದು ಸಿಇಟಿ ಪರೀಕ್ಷೆಯನ್ನು ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಫಲಿತಾಂಶವನ್ನು ಪ್ರಕಟಿಸಿದೆ. ಈ ಫಲಿತಾಂಶದ ಆಧಾರದಲ್ಲಿ 2,15,595 ಅಭ್ಯರ್ಥಿಗಳು ಎಂಜಿನಿಯರಿಂಗ್, 2,15,965 ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ) ಹಾಗೂ 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.
ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣ http://kea.kar.nic.inನಲ್ಲಿ ಫಲಿತಾಂಶವನ್ನು ನೋಡಬಹುದು. ಆದರೆ, ಅಭ್ಯರ್ಥಿಗಳ ಮೂಲ ಪ್ರಮಾಣಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಪ್ರಾಧಿಕಾರವು ಒಂದೂವರೆ ತಿಂಗಳ ಹಿಂದೆ ಎಂಜಿನಿಯರಿಂಗ್ ಜತೆಗೆ ವೆಟರ್ನರಿ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ ಅಂಡ್ ಯೋಗ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸುಗಳಿಗೆ ರಾಜ್ಯದ 737 ಕ್ಷೇತ್ರಗಳಲ್ಲಿ ಸಿಇಟಿ ನಡೆಸಿತ್ತು. ಒಟ್ಟು 3,49,653 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 3,10,314 ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಸಿಇಟಿ ಪರೀಕ್ಷೆಯಲ್ಲಿ ಎಲ್ಲ ನಾಲ್ಕು ವಿಷಯಗಳಲ್ಲೂ ಪಠ್ಯಕ್ಕೆ ಹೊರತಾದ 50 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಷಯ ತಜ್ಞರ ನಿರ್ದೇಶನದ ಮೇರೆಗೆ ಈ ಪ್ರಶ್ನೆಗಳನ್ನು ಮೌಲ್ಯಮಾಪನದ ಸಂದರ್ಭದಲ್ಲಿ ಪರಿಗಣಿಸದೆ ಕೈಬಿಡಲಾಗಿದೆ. ಜತೆಗೆ ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ.
ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ವರ್ಷ ದ್ವಿತೀಯ ಪಿಯುಸಿಗೆ ಎರಡು ಪರೀಕ್ಷೆಗಳನ್ನು ಮಾಡಿದ್ದು, ಅವುಗಳಲ್ಲಿ ಅತೀಹೆಚ್ಚು ಅಂಕ ಪಡೆದಿರುವುದನ್ನೇ ರಾಂಕ್ ಪಟ್ಟಿಗೆ ಪರಿಗಣಿಸಲಾಗಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಸದ್ಯದ ಫಲಿತಾಂಶದ ಆಧಾರದಲ್ಲಿ 2,15,595 ಅಭ್ಯರ್ಥಿಗಳು ಎಂಜಿನಿಯರಿಂಗ್ 2,15,965 ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ), 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಅಭ್ಯರ್ಥಿಗಳ ಮೂಲ ಪ್ರಮಾಣಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ.
ಯುಜಿ ನೀಟ್ ಪರೀಕ್ಷೆಯ ಫಲಿತಾಂಶ ಮತ್ತು ಎಂಸಿಸಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಗಣನೆಗೆ ತೆಗೆದುಕೊಂಡು, ಬಳಿಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಜಂಟಿ ಕೌನ್ಸೆಲಿಂಗ್ ನಡೆಸಲಿರುವ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ `ನಾಟಾ’ (ಎನ್ಎಟಿಎ) ಪರೀಕ್ಷೆಯಲ್ಲಿ ಅವರು ಗಳಿಸಲಿರುವ ಅಂಕಗಳನ್ನು ಪರಿಗಣಿಸಿ ರಾಂಕಿಂಗ್ ಘೋಷಿಸಲಾಗುವುದು. ಬಿಪಿಟಿ, ಬಿಪಿಒ, ಬಿ.ಎಸ್ಸಿ (ಅಲೈಡ್ ಹೆಲ್ತ್ ಸೈನ್ಸಸ್) ಕೋರ್ಸುಗಳಿಗೆ ಸಂಬಂಧಿಸಿದ ಫಲಿತಾಂಶಕ್ಕೂ ಇದೇ ಸೂತ್ರವನ್ನು ಅನುಸರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳು ಓಎಂಆರ್ ಉತ್ತರ ಪತ್ರಿಕೆಯಲ್ಲಿ ನಮೂದಿಸಿರುವ ಉತ್ತರಗಳನ್ನು ಮತ್ತು ಸರಿಯಾದ ಉತ್ತರಗಳನ್ನು ಕೂಡ ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಇವುಗಳನ್ನು ತಮಗೆ ಪರೀಕ್ಷಾ ದಿನದಂದೇ ನೀಡಿರುವ ಓಎಂಆರ್ ಉತ್ತರ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡಿಕೊಳ್ಳಬಹುದು. ವಿವಿಧ ಮೀಸಲಾತಿ ಪ್ರವರ್ಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಮತ್ತು ಜಿಲ್ಲಾವಾರು ಅಭ್ಯರ್ಥಿಗಳ ವಿವರಗಳನ್ನು ಕೂಡ ಈಗಾಗಲೇ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಇದುವರೆಗೂ ಕೆಲವು ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯಲ್ಲಿ ಜನ್ಮ ದಿನಾಂಕ/ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಿಲ್ಲ. ಇಂಥವರ ಫಲಿತಾಂಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇಂತಹ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್ ನಲ್ಲಿ ಅಗತ್ಯ ವಿವರಗಳನ್ನು ತುಂಬಿದ ತಕ್ಷಣ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆದ್ದರಿಂದ ಈ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.