ಟಿ-20 ಕ್ರಿಕೆಟ್ ಭಜನೆ ಬಿಟ್ಟು ಇಲ್ನೋಡಿ; ಭಾರತೀಯ ಚೆಸ್ ಆಟಗಾರನ ಆಟೋಗ್ರಾಫ್‌ಗೆ ಮುಗಿಬಿದ್ದ ವಿದೇಶಿಗರು.

ಬೆಂಗಳೂರು (ಜೂ. 01): ಇಡೀ ದೇಶದಾದ್ಯಂತ ಐಪಿಎಲ್ 2024ರ ಟಿ-20 ಕ್ರಿಕೆಟ್ ಕ್ರೇಜ್ ಮುಕ್ತಾಯವಾಗಿ, ಈಗ ಟಿ-20 ವಿಶ್ವಕಪ್ ಆರ್ಭಟ ಶುರುವಾಗಿದೆ. ಹೀಗಿರುವಾಗ, ಇಲ್ಲಿ ವಿಶ್ವದ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಪ್ರಜ್ಞಾನಂದನ ಸಹಿಗಾಗಿ ನೂರಾರು ವಿದೇಶಿಗರು ಮುಗಿ ಬಿದ್ದಿದ್ದಾರೆ.

ಹೌದು, ದೇಶದಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದೆ. ಕ್ರಿಕೆಟ್ ಬಿಟ್ಟರೆ ಬೇರಾವ ಕ್ರೀಡೆಯೂ ಇಲ್ಲವೆಂಬಂತೆ ಅಭಿಮಾನಿಗಳು ಕ್ರಿಕೆಟರ್ಸ್‌ಗಳನ್ನು ಆರಾಧಿಸುತ್ತಿದ್ದಾರೆ. ಆದರೆ, ವಿಶ್ವದ ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸಿ ಭಾರತದಿಂದ ಚೆಸ್ ಕಿರೀಟ ಕಿತ್ತುಕೊಂಡಿದ್ದ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಸೋಲಿಸಿದ್ದಾನೆ. ಇತ್ತೀಚೆಗೆ ನಡೆದ ಫಿಡೆ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಲ್‌ಸನ್‌ನಿಂದ ಸೋತು ವಿಶ್ವ ಚಾಂಪಿಯನ್ ಆಗುವುದರಲ್ಲಿ ಎಡವಿದ ತಮಿಳುನಾಡಿದ ಹುಡುಗ ಆರ್. ಪ್ರಜ್ಞಾನಂದ ಈಗ ವಿಶ್ವ ಚಾಂಪಿಯನ್ ಅವರನ್ನು ಅವರದ್ದೇ ದೇಶದಲ್ಲಿ ಆಯೋಜಿಸಲಾಗಿದ್ದ ಚೆಸ್ ಟೂರ್ನಿಯಲ್ಲಿ ಸೋಲಿಸಿದ್ದಾರೆ.

ಮಾನವನ ಏಕಾಗ್ರತೆ, ಬುದ್ಧಿಮತ್ತೆ ಮತ್ತು ಚಾಣಾಕ್ಷತೆಗೆ ಪ್ರಸಿದ್ಧಿಯಾದ ಆಟವೆಂದರೆ ಅದು ಚೆಸ್ ಆಟವಾಗಿದೆ. ಮ್ಯಾಗ್ನಸ್ ಕಾರ್ಲ್‌ಸನ್ ಅವರ ಆಟ ವೀಕ್ಷಣೆಗೆ ಬಂದಿದ್ದ ಸಾವಿರಾರು ವಿದೇಶಿಗರು ಅಚ್ಚರಿಯ ಮೂಲಕ ಚಾಂಪಿಯನ್ ಆದ ಆರ್. ಪ್ರಜ್ಞಾನಂದನ ಸಹಿಗಾಗಿ ನೂರಾರು ವಿದೇಶಿಗರು ಕಾಯುತ್ತಿದ್ದರು. ಪ್ರಜ್ಞಾನಂದ ಹೊರಗೆ ಬರುತ್ತಿದ್ದಂತೆ ಆತನಿಗೆ ಹಲವರು ಶುಭಾಶಯ ಕೋರಿದರೆ, ಇನ್ನು ಬಹುತೇಕರು ಅವರ ಸಹಿಗಾಗಿ ಹಾಗೂ ಸೆಲ್ಫಿಗಾಗಿ ಕಾಯುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಭಾರತದ 18 ವರ್ಷದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ, ವಿಶ್ವ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಮೊದಲ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾರ್ವೆ ಚೆಸ್ ಟೂರ್ನಮೆಂಟ್‌ನ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಶ್ವದ 6 ಅಗ್ರ ಚೆಸ್ ಆಟಗಾರರು ಪಾಲ್ಗೊಂಡಿರುವ ಪ್ರತಿಷ್ಠಿತ ಚೆಸ್ ಟೂರ್ನಮೆಂಟ್‌ನಲ್ಲಿ ಬಿಳಿ ಕಾಯಿನ್ ಮುನ್ನಡೆಸಿದ ಪ್ರಜ್ಞಾನಂದ, ತವರಿನ ನಂ.1 ಶ್ರೇಯಾಂಕದ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಪ್ರಜ್ಞಾನಂದ 9 ಅಂಕಗಳ ಪೈಕಿ 5.5 ಅಂಕಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. 

ಕಳೆದ ವರ್ಷ ನಡೆದ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್.ಪ್ರಜ್ಞಾನಂದ, ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಶರಣಾಗಿದ್ದರು. ಇದೀಗ ಆ ಸೋಲಿಗೆ ನಾರ್ವೆಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮ್ಯಾಗ್ನಸ್ ಕಾರ್ಲ್‌ಸನ್ ಸೋಲಿಸಿದ ಭಾರತದ 4ನೇ ಚೆಸ್ ಪಟು ಎನ್ನುವ ಹಿರಿಮೆಗೆ ಆರ್ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ಮತ್ತೊಂದೆಡೆ ಇದೇ ಟೂರ್ನಿಯಲ್ಲಿ ಪ್ರಜ್ಞಾನಂದ ಅವರ ಸಹೋದರಿ ಆರ್. ವೈಶಾಲಿ ಕೂಡ ನಾರ್ವೆ ಚೆಸ್ ಮಹಿಳಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಗ್ರ ಶ್ರೇಯಾಂಕ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಚೆಸ್‌ ಕ್ರೀಡೆಯಲ್ಲಿ ವಿಶ್ವನಾಥನ್ ಆನಂದ್ ಅವರು ತಲುಪಿದ ಉತ್ತುಂಗದ ಉನ್ನತ ಸ್ಥಾನಕ್ಕೆ ಆರ್. ಪ್ರಜ್ಞಾನಂದ ಕೂಡ ಏರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.

Source : https://kannada.asianetnews.com/other-sports/world-chess-champion-magnus-carlsen-defeated-by-praggnanandhaa-foreigners-asking-autograph-sat-seej5e

Leave a Reply

Your email address will not be published. Required fields are marked *