ಜೂನ್ 7 ರಂದು ಎನ್ಡಿಎ ಸಂಸದರೊಂದಿಗೆ ಸಭೆ ನಡೆಸಲಾಗುವುದು. ನಂತರ ಬಳಿಕ ಎಲ್ಲ ಮಿತ್ರಪಕ್ಷಗಳ ಜೊತೆಗೂಡಿ ರಾಷ್ಟ್ರಪತಿ ಅವರನ್ನು ಭೇಟಿ ಆಗಲಿದ್ದಾರೆ.
ನವದೆಹಲಿ: ನಿರ್ಗಮಿತ ಪ್ರಧಾನಿ ನರೇಂದ್ರ ಮೋದಿ ದೆಹಲಿ ನಿವಾಸದಲ್ಲಿ ನಡೆದ ಎನ್ಡಿಎ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎನ್ಡಿಎ ನಾಯಕರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ದೆಹಲಿಯಲ್ಲಿ ಎನ್ಡಿಎ ನಾಯಕರು ಈ ಪ್ರಸ್ತಾವನೆಯನ್ನು ಅಂಗೀಕರಿಸಿ, ಸಹಿ ಮಾಡಿದ್ದಾರೆ.
ಜೂನ್ 7 ರಂದು ಎನ್ಡಿಎ ಸಂಸದರೊಂದಿಗೆ ಸಭೆ ನಡೆಸಲಾಗುವುದು. ನಂತರ ಬಳಿಕ ಎಲ್ಲ ಮಿತ್ರಪಕ್ಷಗಳ ಜೊತೆಗೂಡಿ ರಾಷ್ಟ್ರಪತಿ ಅವರನ್ನು ಭೇಟಿ ಆಗಲಿದ್ದಾರೆ. ಶುಕ್ರವಾರ ಸಂಜೆ 5 ರಿಂದ 7 ಗಂಟೆ ಮಧ್ಯೆ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ.
ಸಭೆಯಲ್ಲಿ ಯಾರೆಲ್ಲಾ ಭಾಗಿ?
ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಎಲ್ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್, ಪವನ್ ಕಲ್ಯಾಣ್ ಭಾಗಿಯಾಗಿದ್ದರು. ಮೋದಿ ಮತ್ತು ಇತರ ಹಿರಿಯ ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಭೆಗೆ ಗೈರಾಗಿದ್ದಾರೆ.
ಸಭೆ ಏಕೆ?
ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮಹತ್ವ ಸಭೆ ನಡೆಸಿತು. ಈ ಸಭೆಯಲ್ಲಿ ಬಿಜೆಪಿ ಮಿತ್ರಪಕ್ಷಗಳ ನಾಯಕರು ಭಾಗಿಯಾಗಿದ್ದರು. ಹಿರಿಯ ನಾಯಕರ ಸಭೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯಿತು. 240 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ತೆಲುಗು ದೇಶಂ ಪಕ್ಷ ಮತ್ತು ಜನತಾ ದಳ (ಯುನೈಟೆಡ್) ಸೇರಿದಂತೆ ಹಲವಾರು ಮಿತ್ರಪಕ್ಷಗಳ ಬೆಂಬಲದೊಂದಿಗೆ 272 ಬಹುಮತದ ಗಡಿ ದಾಟಿದೆ.
ಕಿಂಗ್ ಮೇಕರ್ಗಳಾದ ನಾಯ್ಡು-ನಿತೀಶ್
ಎನ್ಡಿಎ ಸತತ 3ನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದು, ಈ ಬಾರಿ ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಕಿಂಗ್ ಮೇಕರ್ಗಳಾಗಿದ್ದಾರೆ. ಬಿಜೆಪಿ ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲದ ಕಾರಣ, ನಾಯ್ಡು-ನಿತೀಶ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮೋದಿ ದಾಖಲೆಯ ಮೂರನೇ ಅವಧಿಗೆ ಸಿದ್ಧರಾಗಿದ್ದಾರೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್ಡಿಎ ಬಹುಮತದ 272 ಕ್ಕಿಂತ ಹೆಚ್ಚು ಇದೆ. 240 ಸ್ಥಾನಗಳನ್ನು ಗೆದ್ದ ಬಿಜೆಪಿ, 2014 ರಿಂದ ಮೊದಲ ಬಾರಿಗೆ ಮ್ಯಾಜಿಕ್ ಸಂಖ್ಯೆಗಿಂತ ಕಡಿಮೆ ಸೀಟುಗಳನ್ನು ಗೆದ್ದಿದೆ. ಹಾಗಾಗಿ ಮಿತ್ರಪಕ್ಷಗಳ ಮೇಲೆ ಅವಲಂಬನೆ ಅನಿವಾರ್ಯವಾಗಿದೆ.