ಐರ್ಲೆಂಡ್‌‌ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು, ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ.

ಐಸಿಸಿ ಟಿ20 ವಿಶ್ವಕಪ್‌ 2024ರ 8ನೇ ಪಂದ್ಯದಲ್ಲಿ ಭಾರತ ಮತ್ತು ಐರ್ಲೆಂಡ್ (IND vs IRE) ನಡುವೆ ನಡೆಯಿತು. ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯ ಇದಾಗಿತ್ತು. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ಐರ್ಲೆಂಡ್ ತಂಡವನ್ನು 96 ರನ್ ಗಳಿಗೆ ಕಟ್ಟಿಹಾಕಿತು. ಟಾಸ್‌‌ ಗೆದ್ದು ಮೊಲದು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಮೂಲಕ ಭಾರತ ತಂಡ ಐರ್ಲೆಂಡ್‌‌ ತಂಡವನ್ನು 16 ಓವರ್‌ಗೆ 96 ರನ್‌ ಗಳಿಸುವ ಮೂಲಕ ಟೀಂ ಇಂಡಿಯಾಗೆ 97 ರನ್‌ಗಳ ಸುಲಭ ಗುರಿ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ 12.2 ಓವರ್‌ಗೆ 97 ರನ್‌ ಗಳಿಸುವ ಮೂಲಕ ಬರೋಬ್ಬರಿ 8 ವಿಕೆಟ್‌‌ಗಳ ಜಯ ದಾಖಲಿಸುವ ಮೂಲಕ ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಕೊಹ್ಲಿ ನಿರಾಸೆ; ಪಂತ್‌-ರೋಹಿತ್‌ ಅಬ್ಬರ:

ನಿರೀಕ್ಷೆಯಂತೆ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಜೊತೆ ಆರಂಭಿಕರಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಆದರೆ ಐರ್ಲೆಂಡ್‌ ವಿರುದ್ಧವೇ ಕೊಹ್ಲಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ 5 ಎಸೆತದಲ್ಲಿ ಕೇವಲ 1 ರನ್‌ ಗಳಿಸಿ ಔಟ್ ಆದರು. ಆದರೆ ನಾಯಕ ರೋಹಿತ್‌ ಶರ್ಮಾ ಭರ್ಜರಿ ಬ್ಯಾಟಿಂಗ್‌‌ ಮಾಡುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ರಿಟೈರ್ಡ್‌‌ ಹರ್ಟ್‌‌ ಆಗಿ ಪೆವೆಲಿಯನ್‌ ಸೇರಿದರು. ರೋಹಿತ್‌ ಶರ್ಮಾ 37 ಎಸೆತದಲ್ಲಿ 3 ಸಿಕ್ಸ್‌ ಮತ್ತು 4 ಬೌಂಡರಿ ಸಹಿತ 52 ರನ್‌ ಗಳಿಸಿದರು. ನಾಯಕನಿಗೆ ರಿಷಭ್‌ ಪಂತ್‌ ಸಹ ಉತ್ತಮ ಸಾಥ್‌ ನೀಡಿದರು.

ಬರೋಬ್ಬರಿ ಒಂದುವರೆ ವರ್ಷದ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡಿದ ಪಂತ್‌ ಅಭ್ಯಾಸ ಪಂದ್ಯ ಮಾತ್ರವಲ್ಲದೇ ಐರ್ಲೆಂಡ್‌‌ ವಿರುದ್ಧವೂ ಸಹ ಉತ್ತಮ ಬ್ಯಾಟಿಂಗ್‌ ಹಾಗೂ ಕೀಪಿಂಗ್‌ ಪ್ರದರ್ಶನ ನೀಡುವ ಮೂಲಕ ಪಂತ್‌ ಈಸ್ ಬ್ಯಾಕ್‌ ಎಂದು ಮತ್ತೊಮ್ಮೆ ಹೇಳಿದಂತಾಗಿದೆ. ಅಂತಿಮವಾಗಿ ರಿಷಭ್‌ ಪಂತ್‌ 26 ಎಸೆತದಲ್ಲಿ 2 ಸಿಕ್ಸ್‌ ಮತ್ತು 3 ಫೋರ್‌ ಮೂಲಕ 36 ರನ್‌ ಗಳಿಸಿ ವಿನ್ನಿಂಗ್‌ ಶಾಟ್‌‌ ಸಹ ಆಡಿದರು. ಆದರೆ ಸೂರ್ಯಕುಮಾರ್ ಯಾದವ್‌ 4 ಎಸೆತದಲ್ಲಿ 2 ರನ್‌ ಗಳಿಸಿ ಬೇಡದ ಶಾಟ್‌‌ ಹೊಡೆಯುವ ಯತ್ನದಲ್ಲಿ ಕ್ಯಾಚಿತ್ತು ಔಟ್ ಆದರು.

ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಐರಿಶ್‌ ಬ್ಯಾಟರ್ಸ್:

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ವಿಶ್ವಕಪ್ ಪಂದ್ಯ ನಡೆಯಿತು. ಈ ಪಂದ್ಯದ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು ಮತ್ತು ಐರ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಸವಾಲು ಹಾಕಿದರು. ಟೀಂ ಇಂಡಿಯಾದ ಅಪಾಯಕಾರಿ ಬೌಲಿಂಗ್ ಎದುರು ಐರ್ಲೆಂಡ್ ನ ಬ್ಯಾಟ್ಸ್ ಮನ್ ಗಳು ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಐರ್ಲೆಂಡ್ ತಂಡದ ಪರ ಗರೆಥ್ ಡೆಲಾನಿ 26 ರನ್, ಕರ್ಟಿಸ್ ಕ್ಯಾಂಫರ್ 12 ರನ್, ಲೋರ್ಕನ್ ಟಕರ್ 10 ರನ್, ಜೋಶುವಾ ಲಿಟಲ್ 14 ರನ್ ಗಳಿಸಿದರು. ಉಳಿದಂತೆ ಪಾಲ್ ಸ್ಟಿರ್ಲಿಂಗ್ 2 ರನ್, ಆಂಡ್ರ್ಯೂ ಬಾಲ್ಬಿರ್ನಿ 5 ರನ್, ಹ್ಯಾರಿ ಟೆಕ್ಟರ್ 4 ರನ್, ಜಾರ್ಜ್ ಡಾಕ್ರೆಲ್ 3 ರನ್, ಮಾರ್ಕ್ ಅಡೇರ್ 3 ರನ್, ಬ್ಯಾರಿ ಮೆಕಾರ್ಥಿ ಶೂನ್ಯ ಮತ್ತು ಬೆಂಜಮಿನ್ ವೈಟ್ 2 ರನ್‌ ಗಳಿಸಿದರು.

ಭಾರತ ತಂಡದ ಭರ್ಜರಿ ಬೌಲಿಂಗ್‌:

ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ವೇಗಿಗಳು ಐರ್ಲೆಂಡ್‌‌ ಬ್ಯಾಟ್ಸ್‌‌ಮನ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿ ಆದರು. ಆರಂಭದಿಂದಲೇ ಭಾರತೀಯ ಬೌಲರ್‌ಗಳ ಎದುರು ಪೆವೆಲಿಯನ್‌ ಪರೇಡ್ ನಡೆಸಿದ ಐರಿಶ್‌ ಬ್ಯಾಟರ್ಸ್‌‌ಗಳು ಒಮ್ಮೆಯೂ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ ಉಪನಾಯಕ ಹಾರ್ದಿಕ್ ಪಾಂಡ್ಯ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರು. ಪಾಂಡ್ಯ 4 ಓವರ್‌ಗೆ 27 ರನ್‌ ನೀಡಿ 3 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ 2 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಐರ್ಲೆಂಡ್ ತಂಡ 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿಗೆ 97 ರನ್ ಗಳ ಸವಾಲನ್ನು ನೀಡಿತು.

Source : https://kannada.news18.com/news/sports/t20-world-cup-2024-ind-vs-ire-match-team-india-won-by-8-wickets-skb-1729308.html

 

Leave a Reply

Your email address will not be published. Required fields are marked *