106 ದಿನಗಳಲ್ಲಿ ನಿರ್ಮಾಣಗೊಂಡಿದ್ದ , 250 ಕೋಟಿ ವೆಚ್ಚದ  ಕ್ರೀಡಾಂಗಣ 6 ವಾರಗಳಲ್ಲಿ ನೆಲಸಮ!

9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಕ್ರಿಕೆಟ್​ಗೆ ಹೆಚ್ಚು ಆಸಕ್ತಿ ತೋರದ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಈ ಕಾರಣದಿಂದಾಗಿ ನ್ಯೂಯಾರ್ಕ್‌ನಲ್ಲಿ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲಾಗಿತ್ತು.

ಬರೋಬ್ಬರಿ 30 ಮಿಲಿಯನ್ ಡಾಲರ್ ಅಂದರೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾಡ್ಯುಲರ್ ಕ್ರೀಡಾಂಗಣವನ್ನು ಕೇವಲ 106 ದಿನಗಳಲ್ಲಿ ಕಟ್ಟಲಾಗಿತ್ತು. ಆದರೆ, ಕೇವಲ 8 ಟಿ20 ವಿಶ್ವಕಪ್​ ಪಂದ್ಯಗಳಿಗೆ ಬಳಕೆಯಾಗಿದ್ದ ಈ ಮೈದಾನವನ್ನು ಇದೀಗ ಕೆಡವಲಾಗುತ್ತಿದೆ.

ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಇರಾದೆಯಲ್ಲಿದ್ದ ಐಸಿಸಿ, ಈ ವರ್ಷದ ಜನವರಿಯಲ್ಲಿ ನ್ಯೂಯಾರ್ಕ್‌ನಲ್ಲಿ 34,000 ಆಸನಗಳ ಮಾಡ್ಯುಲರ್ ಸ್ಟೇಡಿಯಂ ನಿರ್ಮಾಣವನ್ನು ಕೈಗೆತ್ತಿಕೊಂಡಿತ್ತು. ಅದರಂತೆ ಕೇವಲ 106 ದಿನಗಳಲ್ಲಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂ ಹೆಸರಿನಲ್ಲಿ ನೂತನ ತಂತ್ರಜ್ಞಾನದ ಸುಸಜ್ಜೀತ ಕ್ರೀಡಾಂಗಣವನ್ನು ನಿರ್ಮಿಸಿಲಾಗಿತ್ತು.

ಈ ಮಾಡ್ಯುಲರ್ ಸ್ಟೇಡಿಯಂನ ವಿಶೇಷತೆಯೆಂದರೆ ಈ ಮೈದಾನ ಅದರ ಪಿಚ್, ಸ್ಟ್ಯಾಂಡ್ ಇತ್ಯಾದಿಗಳನ್ನು ಈ ಪಂದ್ಯಾವಳಿಗಾಗಿಯೇ ನಿರ್ಮಿಸಲಾಗಿತ್ತು. ಹಾಗಾಗಿ ಈ ಮಾಡ್ಯುಲರ್ ಕ್ರೀಡಾಂಗಣದ ನಿರ್ಮಾಣದಲ್ಲಿ ಅಲ್ಯೂಮಿನಿಯಂ ಮತ್ತು ಉಕ್ಕನ್ನು ಬಳಕೆ ಮಾಡಲಾಗಿತ್ತು.

ಸಮಯದ ಕೊರತೆ ಮತ್ತು ಪರಿಸರ ಸುಸ್ಥಿರತೆ ಎರಡು ಪ್ರಮುಖ ಕಾರಣಗಳಿಂದ ಈ ಮಾಡ್ಯುಲರ್ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿತ್ತು. ಏಕೆಂದರೆ ಟಿ20 ವಿಶ್ವಕಪ್ ಹೊರತುಪಡಿಸಿ ಅಮೆರಿಕದಲ್ಲಿ ಉಳಿದಂತೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವುದು ತೀರ ಕಡಿಮೆ. ಆದ್ದರಿಂದ ಟಿ20 ವಿಶ್ವಕಪ್ ಪಂದ್ಯಗಳು ಮುಗಿದ ನಂತರ ಈ ಕ್ರೀಡಾಂಗಣವನ್ನು ಕೆಡುವಬೇಕಾಗಿತ್ತು.

ಹೀಗಾಗಿ ಮಾಡ್ಯುಲರ್ ಕ್ರೀಡಾಂಗಣವನ್ನು ನಿರ್ಮಿಸಲು ಐಸಿಸಿ ಮುಂದಾಗಿತ್ತು. ಇದೀಗ ಈ ಕ್ರೀಡಾಂಗಣದಲ್ಲಿ ವೇಳಾಪಟ್ಟಿಯಂತೆ 8 ಪಂದ್ಯಗಳನ್ನು ಆಡಿ ಮುಗಿಸಲಾಗಿದ್ದು, ಈ ಕ್ರೀಡಾಂಗಣ ನಿರ್ಮಾಣದ ಹಿಂದಿದ್ದ ಉದ್ದೇಶದಂತೆ ಇದೀಗ ಈ ಕ್ರೀಡಾಂಗಣವನ್ನು ನೆಲಸಮಗೊಳಿಸಿ, ಮತ್ತೆ ಈ ಜಾಗವನ್ನು ತನ್ನ ಹಳೆಯ ಸ್ವರೂಪಕ್ಕೆ ತರಲಾಗುತ್ತಿದೆ.

106 ದಿನಗಳಲ್ಲಿ ನಿರ್ಮಾಣಗೊಂಡಿದ್ದ ಈ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದೀಗ 6 ವಾರಗಳಲ್ಲಿ ನೆಲಸಮಗೊಳ್ಳಲಿದೆ. Cricbuzz ವರದಿ ಪ್ರಕಾರ, ಭಾರತ ಮತ್ತು ಅಮೆರಿಕ ನಡುವಿನ ಪಂದ್ಯದ ನಂತರ ಈ ಕ್ರೀಡಾಂಗಣವನ್ನು ಕೆಡವುವ ಕೆಲಸ ಪ್ರಾರಂಭವಾಗಿದೆ.

ಈ ಕ್ರೀಡಾಂಗಣದ ಪಿಚ್‌ಗಳಿಗೆ ಸಂಬಂಧಿಸಿದಂತೆ, ನಸ್ಸೌ ಕೌಂಟಿ ಅಧಿಕಾರಿಗಳು ಅವುಗಳನ್ನು ಇರಿಸಿಕೊಳ್ಳಲು ಬಯಸಿದರೆ, ಅವರು ಈ ಪಿಚ್​ಗಳನ್ನು ಅಲ್ಲೆ ಉಳಿಸಿಕೊಳ್ಳಬಹುದು ಎಂದು ಐಸಿಸಿ ಅಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಈ ಪಿಚ್​ಗಳು ಅವರಿಗೆ ಬೇಡವೆಂದರೆ ನಾವು ಈ ಪಿಚ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ ಎಂದಿದ್ದಾರೆ.

ಈ ಕ್ರೀಡಾಂಗಣದಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಪಂದ್ಯಗಳನ್ನು ಆಡಲು ಮೊದಲು ಯೋಜಿಸಲಾಗಿತ್ತು. ಆದರೆ ಎಂಎಲ್ಸಿ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಉತ್ಸುಕರಾಗಿಲ್ಲ ಎಂದು ಹೇಳಲಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ MLC ಬೇಸ್ ನ್ಯೂಯಾರ್ಕ್‌ನಲ್ಲಿದೆ. ಈಗ ಭವಿಷ್ಯದಲ್ಲಿ ಅಂಬಾನಿ ಹೊಸ ಕ್ರೀಡಾಂಗಣವನ್ನು ನಿರ್ಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಕ್ರೀಡಾಂಗಣ ಎಷ್ಟು ಚರ್ಚೆಯಲ್ಲಿತ್ತೋ, ವಿಶ್ವಕಪ್ ಆರಂಭವಾದ ನಂತರವೂ ಈ ಕ್ರೀಡಾಂಗಣದ ಪಿಚ್‌ಗಳು ಅಷ್ಟೇ ಚರ್ಚೆಯಲ್ಲಿದ್ದವು. ಈ ಪಿಚ್‌ನಲ್ಲಿ ರನ್ ಗಳಿಸಲು ಬ್ಯಾಟ್ಸ್‌ಮನ್‌ಗಳು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ಈ ಮೈದಾನದಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ ಕೇವಲ 108 ರನ್ ಆಗಿತ್ತು. ಅಲ್ಲದೆ ನಿನ್ನೆ ಅಮೆರಿಕ ನೀಡಿದ 111 ರನ್​ಗಳ ಗುರಿ ಬೆನ್ನಟ್ಟಲು ಟೀಂ ಇಂಡಿಯಾ ಕೂಡ ಬೆವರು ಹರಿಸಬೇಕಾಯಿತು.

Source : https://tv9kannada.com/photo-gallery/cricket-photos/t20-world-cup-2024-new-york-nassau-county-stadium-dismantling-work-begun-kannada-news-psr-849611.html

Leave a Reply

Your email address will not be published. Required fields are marked *