ತಿರುವನಂತಪುರಂ: ಆಘಾತಕಾರಿ ಘಟನೆಯೊಂದರಲ್ಲಿ ಮಾವುತನನ್ನು ಆನೆಯೊಂದು ಭೀಕರವಾಗಿ ತುಳಿದು ಸಾಯಿಸಿರುವ ಘಟನೆ ದೇವರನಾಡು ಕೇರಳದ ಕಲ್ಲರ್ನಲ್ಲಿ ನಡೆದಿದೆ. ಮೃತರನ್ನು ಬಾಲಕೃಷ್ಣನ್ (62) ಎಂದು ಗುರುತಿಸಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಆನೆಗೆ ಮಾವುತ ಸರಿಯಾಗಿ ನಿಲ್ಲುವಂತೆ ಸೂಚಿಸುತ್ತಾನೆ. ಕೆಲಕಾಲ ಮಾವುತನ ಮಾತನ್ನು ಕೇಳುವ ಆನೆ ಆ ಬಳಿಕ ಆತನನ್ನು ನೆಲಕ್ಕೆ ಹಾಕಿ ಹೊಸಗಲು ಶುರು ಮಾಡುತ್ತದೆ. ಬಳಿಕ ತನ್ನ ಸೊಂಡಿಲಿನಿಂದ ಎತ್ತಿ ಮಾವುತನನ್ನು ಬಿಸಾಡುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಡುಕ್ಕಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮೃತರನ್ನು ನೀಲೇಶ್ವರಂ ಮೂಲದ ಬಾಲಕೃಷ್ಣನ್ ಎಂದು ಗುರುತಿಸಲಾಗಿದ್ದು, ಕಲ್ಲರ್ನಲ್ಲಿ ಅಕ್ರಮ ಆನೆ ಸಫಾರಿ ನಡೆಸುತ್ತಿದ್ದದ್ದು, ಮಾವುತನ ಹತ್ಯೆಯ ಬಳಿಕ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಕ್ರಮ ಆನೆ ಸಫಾರಿ ಹಾಗೂ ಮಾವುತನ ಹತ್ಯೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಫಾರಿಯಲ್ಲಿರುವ ಆನೆಗಳು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲಾಗಿಲ್ಲ. ಈ ಸಂಬಂಧ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಆನೆಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಈ ರೀತಿಯ ಅನೇಕ ಸಫಾರಿಗಳು ತಲೆ ಎತ್ತಿದ್ದು, ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇಡುಕ್ಕಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.