ಮಾನ್ಸೂನ್​​​ನಲ್ಲಿ ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ನೀಡಿದ್ರೆ ಮಜಾನೇ ಬೇರೆ, ಒಮ್ಮೆ ಭೇಟಿ ನೀಡಿ.

ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಾನ್ಸೂನ್ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿಕೊಂಡಿದ್ದರೆ, ಕರ್ನಾಟಕದಲ್ಲಿ ವಿವಿಧ ಪ್ರೇಕ್ಷಣೀಯ ತಾಣಗಳಿವೆ. ಇಲ್ಲಿ ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಾನ್ಸೂನ್ ಸಮಯದಲ್ಲಿ ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ನೀಡಿದರೆ ಜಲಧಾರೆಗಳ ಸೌಂದರ್ಯ ರಾಶಿ ಹಾಗೂ ಪ್ರಕೃತಿ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು.

ಜೋಗ ಫಾಲ್ಸ್ : ಕರ್ನಾಟಕದಲ್ಲಿ ಮಾನ್ಸೂನ್ ನಲ್ಲಿ ನೋಡಲೇಬೇಕಾದ ತಾಣಗಳಲ್ಲಿ ಜೋಗ ಫಾಲ್ಸ್ ಕೂಡ ಒಂದು. ಭಾರತದ ಎರಡನೇ ಎರಡನೇ ಅತಿ ಎತ್ತರದ ಜಲಪಾತ ಎನಿಸಿಕೊಂಡಿದ್ದು ಇದು ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಮಳೆಗಾಲದಲ್ಲಿ ಹಾಲಿನ ನೊರೆಯಂತೆ ಉಕ್ಕಿ ಹರಿಯುವ ಜಲಪಾತವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಆಗುಂಬೆ : ಪ್ರಕೃತಿಯೇ ನಿಮ್ಮ ಸುತ್ತ ಆವರಿಸಿಕೊಂಡಿದೆಯೇನೋ ಎನ್ನುವಂತಹ ಅನುಭವವನ್ನು ನೀಡುತ್ತದೆ ಈ ಆಗುಂಬೆ. ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಕಾಡುಗಳು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಮಾನ್ಸೂನ್ ವೇಳೆ ಪ್ರವಾಸಿರು ಈ ತಾಣಕ್ಕೆ ಭೇಟಿ ನೀಡಿದರೆ ಆಗುಂಬೆ ಸನ್‌ಸೆಟ್ ವೀವ್ ಪಾಯಿಂಟ್, ಬರ್ಕಾನ ಜಲಪಾತ ಸೇರಿದಂತೆ ಇನ್ನಿತ್ತರ ಸ್ಥಳಗಳನ್ನು ವೀಕ್ಷಿಸಬಹುದು.

ಬ್ರಹ್ಮಗಿರಿ ಶಿಖರ : ಕೊಡಗಿನಲ್ಲಿರುವ ತಾಣಗಳ ಪೈಕಿ ಬ್ರಹ್ಮಗಿರಿ ಶಿಖರ ಕೂಡ ಒಂದು. ಈ ಬೆಟ್ಟಕ್ಕೆ ತೆರಳುವ ಸಮಯದಲ್ಲಿ ಹುಲ್ಲುಗಾವಲು, ಬಣ್ಣ ಬಣ್ಣದ ವಿಭಿನ್ನವಾದ ಹೂವುಗಳು, ತೊರೆಗಳು ನಿಮ್ಮ ಗಮನ ಸೆಳೆಯುತ್ತದೆ. ಕಾಡಿನ ನಡುವೆ ನಡೆದುಕೊಂಡು ಹೋಗುತ್ತಿದ್ದರೆ ಬೆಟ್ಟಗಳು ನಿಮ್ಮನ್ನು ಕೈ ಬೀಸಿ ಕರೆದಂತಾಗುತ್ತದೆ.

ಅಬ್ಬೆ ಜಲಪಾತ : ಕರ್ನಾಟಕದ ಜಮ್ಮು ಕಾಶ್ಮೀರ ಎಂದೇ ಹೆಸರುವಾಸಿಯಾಗಿರುವ ಕೊಡಗಿಗೆ ಭೇಟಿ ನೀಡಿದರೆ ಅಲ್ಲಿ ಅಬ್ಬೆ ಜಲಪಾತದ ವೈಯಾರವು ನಿಮ್ಮನ್ನು ಆಕರ್ಷಿಸುತ್ತದೆ. ಮಡಿಕೇರಿ ಪಟ್ಟಣದಿಂದ ಸುಮಾರು ಒಂದು ಕೀ ಮೀ ದೂರದಲ್ಲಿದ್ದು, ಇಲ್ಲಿಗೆ ಭೇಟಿ ನೀಡಿದರೆ ಕಾಫಿ ತೋಟಗಳ ನಡುವೆ ಅಬ್ಬಿ ಜಲಪಾತದ ಸೊಬಗನ್ನು ಸವಿಯಬಹುದು.

ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲುಗಳ ನಡುವೆ ಕಣ್ಮನ ಸೆಳೆಯುವ ತಾಣವೇ ಈ ದಾಂಡೇಲಿ. ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ಪ್ರಸಿದ್ಧವಾಗಿದೆ. ಹೀಗಾಗಿ ಮಾನ್ಸೂನ್ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದರೆ ಪ್ರಕೃತಿ ಸೊಬಗನ್ನು ಸವಿಯುವುದರೊಂದಿಗೆ, ಜಲಕ್ರೀಡೆ ಯಲ್ಲಿ ತೊಡಗಿಸಿಕೊಳ್ಳಬಹುದು.

Source : https://tv9kannada.com/photo-gallery/best-places-to-visit-in-karnataka-during-rainy-season-kannada-news-siu-855311-6.html

Leave a Reply

Your email address will not be published. Required fields are marked *