ಇದೀಗ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಂಪರ್ ಬಹುಮಾನ ಘೋಷಿಸಿದ್ದಾರೆ.
![](https://samagrasuddi.co.in/wp-content/uploads/2024/07/image-2.png)
ಒಂದು ತಿಂಗಳ ಕ್ರಿಕೆಟ್ ಹಬ್ಬಕ್ಕೆ ರೋಚಕವಾಗಿ ನಿನ್ನೆ ತೆರೆಬಿದ್ದಿದೆ. ಟಿ20 ವಿಶ್ವಕಪ್ ಫೈನಲ್‌ನಲ್ಲಿ (T20 World Cup Final) ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನ ಬಗ್ಗುಬಡಿದು 13 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಹಾಗೂ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನ ತೋರಿದ ಟೀಮ್ ಇಂಡಿಯಾ (Team India) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ 125 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯಾಟ ಬಹಳ ಅದ್ಭುತವಾಗಿ, ಪಂದ್ಯದ ಕೊನೆಯವರೆಗೂ ಕುತೂಹಲವನ್ನೇ ಹೆಚ್ಚಿಸಿತ್ತು. ಕೊನೆಗೂ ಟಿ20 ವಿಶ್ವಕಪ್ ಭಾರತದ ಮುಡಿಗೇರಿತು. ಇದೀಗ ಈ ಸಂಭ್ರಮದ ಬೆನ್ನಲ್ಲೇ ಭಾನುವಾರ ಬಿಸಿಸಿಐ 125 ಕೋಟಿ ಬಹುಮಾನ ನೀಡುವ ಮೂಲಕ ಭರ್ಜರಿ ಬಹುಮಾನ ಘೋಷಿಸಿದೆ ಅನ್ನಬಹುದು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ
ಹೌದು, ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಘೋಷಿಸಿದ್ದಾರೆ. ‘ICC ಪುರುಷರ ಟಿ20 ವಿಶ್ವಕಪ್ 2024 ಗೆದ್ದ ಟೀಮ್ ಇಂಡಿಯಾಗೆ 125 ಕೋಟಿ ರೂಪಾಯಿ ಬಹುಮಾನ ನೀಡಲು ತುಂಬಾನೇ ಸಂತೋಷವಾಗುತ್ತಿದೆ. ತಂಡವು ಪಂದ್ಯಾಟದ ಉದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಬಹಳ ಅದ್ಭುತವಾಗಿಯೇ ಪ್ರದರ್ಶಿಸಿದೆ. ಈ ಅತ್ಯುತ್ತಮ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು!’ ಎಂದು ಬರೆದಿದ್ದಾರೆ
ಮೂವರು ಸ್ಟಾರ್ ಆಟಗಾರರು ನಿವೃತ್ತಿ
ಟಿ20 ವಿಶ್ವಕಪ್ ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ರೋಚಕವಾಗಿ ಜಯಗಳಿಸಿದ್ದು, ದೇಶದಾದ್ಯಂತ ಸಂಭ್ರಮ ಮನೆಮಾಡಿದೆ. ಆದ್ರೆ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಮೂವರು ಸ್ಟಾರ್ ಆಟಗಾರರು ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಪ್ರೇಮಿಗಳು ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಹೌದು, ಭಾರತ ತಂಡದ ಹಿರಿಯ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ.