ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವಂತೆ  ಒತ್ತಾಯ .

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗ್ರಾಮ ಅಧ್ಯಕ್ಷ ಕೃಷ್ಣಮೂರ್ತಿ, ಹಲವಾರು ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ರೈತರು ತಾವು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರಕ್ಕಾಗಿ ಅರ್ಜಿಗ ಳನ್ನು ಸಲ್ಲಿಸಿ ದಶಕಗಳೇ ಕಳೆದರೂ, ಇದುವರೆಗೆ ಬೆರಳೆಣಿಕೆ ರೈತರಿಗೆ ಮಾತ್ರ ಭೂಮಿ ಹಕ್ಕು ಪತ್ರ ಸಿಕ್ಕಿದ್ದು, ಇನ್ನು ಬಹುತೇಕರಿಗೆ ತಮ್ಮ ಬಗರ್ ಹುಕುಂ ಜಮೀನುಗಳ ಹಕ್ಕು ಪತ್ರ ಸಿಕ್ಕಿರುವುದಿಲ್ಲ. ಇದಕ್ಕೆ ಕಾರಣ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿಳಂಬ ನೀತಿ ಧೋರಣೆಯಾಗಿದೆ. ಗ್ರಾಮೀಣ ಪ್ರದೇಶದ ಬಡವರಿಗೆ ಜಮೀನು ಅಗತ್ಯವಾಗಿರುತ್ತದೆ, ಜಮೀನು ಆಹಾರ ಧಾನ್ಯ, ಇತರೆ ಕೃಷಿ ಉತ್ಪಾದನೆಯ ಹಾಗೂ ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಪನ್ಮೂಲವಾಗಿದೆ ಎಂಬುದನ್ನು ರೈತರು ಮನೆಗಂಡಿರುತ್ತಾರೆ. ಗ್ರಾಮೀಣ ಜನರು ತಮ್ಮ ಜೀವನೋಪಾಯಕ್ಕಾಗಿ ಹಾಗೂ ಆಹಾರ ಭದ್ರತೆಗಾಗಿ ಜಮೀನನ್ನೇ ಅವಲಂಬಿಸಿದ್ದಾರೆ ಎಂದರು.

ಕರ್ನಾಟಕ ಭೂ ಹಕ್ಕುದಾರರ ವೇದಿಕೆಯು 2001ರಲ್ಲಿ ಸ್ಥಾಪನೆಯಾಗಿದ್ದು, ಕರ್ನಾಟಕದ 12 ಜಿಲ್ಲೆಗಳಲ್ಲಿ ಭೂ ರಹಿತ ರೈತರಿಗೆ ಜಲ ಮತ್ತು ನೆಲ ಒದಗಿಸುವುದೇ ಈ ವೇದಿಕೆಯ ಪರಮಗುರಿ. ಇದುವರೆಗೆ ಈ ವೇದಿಕೆಯು ಸಣ ಅತಿಸಣ್ಣ ಹಿಡುವಳಿದಾರರು. ಆದಿವಾಸಿಗಳು, ಭೂ ರಹಿತ ಕಾರ್ಮಿಕರ ಸಂಕಷ್ಟಗಳನ್ನು ಸರ್ಕಾರದ ಮಟ್ಟದಲ್ಲಿ ಎತ್ತಿತೊರಿಸುವ ಕೆಲಸವನ್ನು ಇಲ್ಲಿಯವರೆಗೆ ಮಾಡಿಕೊಂಡು ಬಂದಿರುತ್ತದೆ. ಬಗರ್ ಹುಕುಂ ಸಾಗುವಳಿದಾರರನ್ನು ಸಂಪರ್ಕಿಸಿ ಜಾಗೃತಿ, ಕಾನೂನಿನ ಅರಿವು ಕಾರ್ಯಕ್ರಮಗಳ ಮೂಲಕ ಪ್ರತಿ ಗ್ರಾಮದಲ್ಲೂ ಗ್ರಾಮ ಮಟ್ಟದ ಭೂ ಹಕ್ಕುದಾರರ ವೇದಿಕೆ ಸಮಿತಿಗಳನ್ನು ರಚಿಸಿ ತನ್ಮೂಲಕ ಬಡ ಸಾಗುವಳಿ ದಾರರಿಗೆ ಭೂ ಹಕ್ಕು ಪತ್ರ ನೀಡುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯು ಎಲ್ಲಾ ಸರ್ಕಾರಗಳನ್ನು ಹಾಗೂ ಅಧಿಕಾರಿಗಳನ್ನು ಇಲ್ಲಿಯವರೆಗೆ ಒತ್ತಾಯಿಸುತ್ತಾ ಬಂದಿದೆ.

ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ತಾಲ್ಲೂಕು ಸಂಚಾಲಕ ವಿ.ಕಲ್ಲಯ್ಯ ಮಾತನಾಡಿ,  ಹೊಸದುರ್ಗ ತಾಲ್ಲೂಕಿನಲ್ಲಿ ನಮೂನೆ 53ರಲ್ಲಿ 475 ಅಜಿಗಳು ವಿವೇವಾರಿಯಾಗದೇ ಬಾಕಿ ಉಳಿದಿದ್ದು, ಹೊಸದಾಗಿ ನಮೂನೆ 57ರಲ್ಲಿ 2019 ರಿಂದ 2023 ರವರೆಗೆ ಅರ್ಜಿ ಕರೆದಾಗ ಹೊಸದುರ್ಗ ತಾಲ್ಲೂಕಿನ ಕಸಬ ಹೋಬಳಿಯಿಂದ 4072 ರೈತರು, ಮಾಡದಕೆರೆ ಹೋಬಳಿಯಿಂದ 4709 ರೈತರು, ಮತ್ತೋಡು ಹೋಬಳಿಯಿಂದ 4945 ರೈತರು ಹಾಗೂ ಶ್ರೀರಾಂಪುರ ಹೋಬಳಿಯಿಂದ 2478 ರೈತರು ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಹಕ್ಕುಪತ್ರಕ್ಕಾಗಿ ನಮೂನೆ 57ರಲ್ಲಿ ಒಟು 16.204 ರೈತರು ಅರ್ಜಿ ಸಲ್ಲಿಸಿರುತ್ತಾರೆ.

ಹೊಸದುರ್ಗ ತಾಲ್ಲೂಕಿನಲ್ಲಿ ಸಾಕಷ್ಟು ಬಗರ್ ಹುಕುಂ ಸಾಗುವಳಿದಾರರಿದ್ದು, ಅವರಲ್ಲಿ ಹಲವಾರು ರೈತರು ಗೋಮಾಳ ಜಾಗದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದಿರುತ್ತಾರೆ. ಕಾನೂನಿನ ಪ್ರಕಾರ 100 ಜಾನುವಾರುಗಳಿಗೆ 30 ಎಕರೆ ಜಮೀನನ್ನು ಮೀಸಲು ಇಡಬೇಕೆಂದು ಹಾಗೂ ಹೆಚ್ಚುವರಿ ಗೋಮಾಳ ಜಾಗ ಇದ್ದಲ್ಲಿ ಅದನ್ನು ಸಾಗುವಳಿದಾರರಿಗೆ ನೀಡಬೇಕೆಂದು ಕಾನೂನು ಹೇಳುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಜಾನುವಾರುಗಳ ಗಣತಿ ಮಾಡದೇ ಇರುವುದರಿಂದ ಗೋಮಾಳ ಜಮೀನು ಮಂಜೂರಾತಿ ಮಾಡುವಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.

ಪ್ರಸ್ತುತ ಕಂದಾಯ ಮಂತ್ರಿಯಾಗಿರುವ ಕೃಷ್ಣ ಭೈರೇಗೌಡರು ಗೋಮಾಳ ಜಮೀನು ನೀಡಲು ಆದೇಶವನ್ನು ನೀಡಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯು ಒತ್ತಾಯಿಸಿದ್ದು, ಹೊಸದುರ್ಗ ತಾಲ್ಲೂಕಿನಲ್ಲಿ ಈಗಾಗಲೇ ಸರ್ಕಾರದವತಿಯಿಂದ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ರಚನೆಯಾಗಿದ್ದು, ಹೊಸದುರ್ಗ ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ನಿರಂತರವಾಗಿ ನಡೆಸಿ ಈಗಾಗಲೇ ನಮೂನೆ 53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವಂತೆ ಸರ್ಕಾರಕ್ಕೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಒತ್ತಾಯಿಸಿದೆ.

ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ ಸಮಿತಿ ಸದಸ್ಯರಾದ ಜಿ.ಚನ್ನಪ್ಪ, ತಾಲ್ಲೂಕು ಸಂಚಾಲಕರಾದ ಶ್ರೀಮತಿ ಶಶಿಕಲಾ, ಸುಗ್ರಾಮ ಗ್ರಾ.ಪಂ. ಚುನಾಯಿತ ಮಹಿಳೆಯರ ಒಕ್ಕೂಟದ ಜಿಲ್ಲಾ ಸಂಚಾಲಕರಾದ ರವಿನಾಯ್ಕ್, ತಾಲ್ಲೂಕು ಸಂಚಾಲಕರಾದ ಶ್ರೀಮತಿ ಲಲೀತಮ್ಮ, ವೇದಿಕೆಯ ಸದಸ್ಯರಾದ ಶಿವಣ್ಣ, ಗಿರಿಯಪ್ಪ, ಕೆಂಚಪ್ಪ, ಶಿವರುದ್ರಮ್ಮ ರಂಗಮ್ಮ, ಆದಿಮೂರ್ತಿ, ಕಣಮಕ್ಕ ಹನುಮಂತಪ್ಪ ಭಾಗವಹಿಸಿದ್ದರು.

Leave a Reply

Your email address will not be published. Required fields are marked *