ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್ ಆಯ್ಕೆ, ಅಧಿಕೃತ ಘೋಷಣೆ!

ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗಿದ್ದಾರೆ. ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ನೂತನ ಕೋಚ್ ಗೌತಮ್ ಗಂಭೀರ್​ ಅವರಿಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಟಿ20 ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿದಿದ್ದು, ಇದೀಗ ನೂತನ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಎಡಗೈ ದಾಂಡಿಗ ಗೌತಮ್ ಗಂಭೀರ ಆಯ್ಕೆಯಾಗಿದ್ದಾರೆ.

2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಭಾರತ ತಂಡಕ್ಕೆ ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದ ರಾಹುಲ್‌ ದ್ರಾವಿಡ್‌ ಅವರ ಅವಧಿ 2024ರ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಅಂತ್ಯವಾಗಿದೆ. ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿದೆ. ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ.

ಇನ್ನು ಟೀಂ ಇಂಡಿಯಾದ ಕೋಚ್ ಆಗಿ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದು, ಭಾರತವು ನನ್ನ ಗುರುತಾಗಿದೆ. ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಅವಕಾಶ. ಬೇರೆ ಟೋಪಿ ಧರಿಸಿದ್ದರೂ ನಾನು ಹಿಂತಿರುಗಿದ್ದಕ್ಕೆ ನನಗೆ ಗೌರವವಿದೆ. ಆದರೆ ನನ್ನ ಗುರಿ ಮೊದಲಿನಂತೆಯೇ ಇದೆ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತೆ ಮಾಡುವುದು. ಬ್ಲ್ಯೂ ಬಾಯ್ಸ್ 1.4 ಬಿಲಿಯನ್ ಭಾರತೀಯರ ಕನಸುಗಳನ್ನು ನನಸಾಗಿಸುತ್ತಾರೆ ಮತ್ತು ಈ ಕನಸುಗಳನ್ನು ನನಸಾಗಿಸಲು ನಾನು ನನ್ನ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತೇನೆ ಎಂದು ವಿಶ್ವಾಸದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಗೌತಮ್ ಗಂಭೀರ್ ಆಯ್ಕೆಗೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ನೇರವಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಬಿಸಿಸಿಐ ಸಂದರ್ಶನದಲ್ಲಿ ಗಂಭೀರ್​ಗೆ ಪ್ರತಿಸ್ಪರ್ಧಿಯಾಗಿ ಡಬ್ಲ್ಯು.ವಿ ರಾಮನ್ ಕಾಣಿಸಿಕೊಂಡಿದ್ದರು.

2021 ರಲ್ಲಿ ಭಾರತ ಮಹಿಳಾ ತಂಡದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದ ರಾಮನ್ ಅವರ ಎಂಟ್ರಿಯೊಂದಿಗೆ ಭಾರತ ತಂಡದ ಮುಂದಿನ ಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲ ಏರ್ಪಟ್ಟಿತ್ತು. ಇದೀಗ ಟೀಮ್ ಇಂಡಿಯಾದ ಕೋಚ್ ಹುದ್ದೆಯನ್ನು ಗೌತಮ್ ಗಂಭೀರ್ ಅಲಂಕರಿಸಿದ್ದಾರೆ.

ಇನ್ನು ಟೀಮ್​ ಇಂಡಿಯಾ ಕೋಚ್​ ಹುದ್ದೆಯಿಂದ ನಿವೃತ್ತಿಯಾಗಿರುವ ರಾಹುಲ್ ದ್ರಾವಿಡ್ ಇನ್ನು ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಕೋಲ್ಕತ್ತಾ ನೈಟ್​ ರೇಡರ್ಸ್(KKR) ಫ್ರಾಂಚೈಸಿಯು ದ್ರಾವಿಡ್​ ಅವರನ್ನು ಮೆಂಟರ್​ ಆಗಿ ನೇಮಕ ಮಾಡಲು ಈಗಾಗಲೇ ಮಾತುಕತೆ ನಡೆಸಿದೆ ಎಂಬ ಅಂತೆ-ಕಂತೆ ಸುದ್ದಿ ಓಡಾಡುತ್ತಿದೆ.

Source : https://tv9kannada.com/sports/cricket-news/finaly-gautam-gambhir-appointed-team-india-head-coach-cricket-news-in-kannada-rbj-863401.html

 

Leave a Reply

Your email address will not be published. Required fields are marked *