ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 11 : ನಗರದ ಮೇದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ರಜತ ಮಹೋತ್ಸವ ಹಾಗೂ ಎರಡನೇ ಕುಂಬಾಭಿಷೇಕ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿನ 18 ಮೆಟ್ಟಿಲುಗಳನ್ನು ಹತ್ತುವ ಅವಕಾಶವನ್ನು ಜೂ. 10 ರ ಬುಧವಾರ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ನಗರದವರು ಮಾತ್ರವಲ್ಲದೆ ಹೊರಗಿನವರು ಸಹಾ ಆಗಮಿಸಿ ಸ್ವಾಮಿಯ 18 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಪುನೀತರಾದರು. ಇದರಲ್ಲಿ ಪುರುಷ, ಮಹಿಳೆ ಮಕ್ಕಳು ಎನ್ನದೆ ಎಲ್ಲರು ಸಹಾ ಮೆಟ್ಟಿಲನ್ನು ಹತ್ತಿದ್ದಾರೆ. ಶಬರಿ ಮಲೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನೇ ಹೋಲುವ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಳೆದ 5 ರಿಂದಲೂ ರಜತ ಮಹೋತ್ಸವ ಹಾಗೂ ಎರಡನೇ ಕುಂಬಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ.ಈ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ 18 ಮೆಟ್ಟಿಲುಗಳನ್ನು ಹತ್ತಲು 12 ವರ್ಷಗಳ ನಂತರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಸುವರ್ಣಾವಕಾಶ ಕಲ್ಪಿಸಿತ್ತು.
ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ದೇವಸ್ಥಾನದ ಮುಂಭಾಗದ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಮಾಡಲು ಅವಕಾಶವನ್ನು ಸಮಿತಿ ಕಲ್ಪಿಸಿತ್ತು ಈ ದೇವಾಲಯ ಥೇಟ್ ಶಬರಿ ಮಲೆ ಮಾದರಿಯಲ್ಲೇ ನಿರ್ಮಾಣವಾಗಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ಇದಾಗಿದೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ದೇವಸ್ಥಾನಗಳಿಗೆ ಕುಂಬಾಭಿಷೇಕ ನಡೆಯಲಿದೆ. ದೇವಸ್ಥಾನ ಪ್ರಾರಂಭವಾಗಿ 25 ವರ್ಷ ಸಂದಿದೆ. ರಜತ ಮಹೋತ್ಸವದೊಂದಿಗೆ ಈಗ ಎರಡನೇ ಕುಂಬಾಭಿಷೇಕ ನಡೆದಿದೆ. ಭಕ್ತಾಧಿಗಳು ಭಕ್ತಿ, ಭಾವ ಪರವಶರಾಗಿ, ಸಂಕಲ್ಪದೊಂದಿಗೆ 18 ಮೆಟ್ಟಿಲು ಹತ್ತಿದ್ದಾರೆ. ಇದೇ ವೇಳೆ ಸುಮಾರು 25 ಸಾವಿರ ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು.