World Championship of Legends 2024: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ಮಾಜಿ ಆಟಗಾರರ ಟೂರ್ನಿ. ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿದಿದ್ದವು. ಅದರಂತೆ ಇದೀಗ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಫೈನಲ್ಗೆ ಲಗ್ಗೆಯಿಟ್ಟಿದೆ.

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 2ನೇ ಸೆಮಿಫೈನಲ್ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ಜಯಭೇರಿ ಬಾರಿಸಿದೆ. ನಾರ್ಥಾಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡದ ನಾಯಕ ಬ್ರೆಟ್ ಲೀ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಆರಂಭಿಕ ರಾಬಿನ್ ಉತ್ತಪ್ಪ ಉತ್ತಮ ಆರಂಭ ಒದಗಿಸಿದ್ದರು.
ಆದರೆ ಮತ್ತೊಂದೆಡೆ ಅಂಬಾಟಿ ರಾಯುಡು ಕೇವಲ 14 ರನ್ಗಳಿಸಿ ಔಟಾದರು. ಇದಾಗ್ಯೂ 35 ಎಸೆತಗಳನ್ನು ಎದುರಿಸಿದ ಉತ್ತಪ್ಪ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 65 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುರೇಶ್ ರೈನಾ ಕೇವಲ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯುವರಾಜ್ ಸಿಂಗ್ 28 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 59 ರನ್ ಬಾರಿಸಿದರು.
ಪಠಾಣ್ ಬ್ರದರ್ಸ್ ಸಿಡಿಲಬ್ಬರ:
ಅಂತಿಮ ಓವರ್ಗಳ ವೇಳೆ ಜೊತೆಗೂಡಿದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ 6 ಓವರ್ಗಳಲ್ಲಿ 95 ರನ್ಗಳು ಮೂಡಿಬಂತು. ಇದರ ನಡುವೆ 23 ಎಸೆತಗಳನ್ನು ಎದುರಿಸಿದ ಯೂಸುಫ್ ಪಠಾಣ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 52 ರನ್ ಬಾರಿಸಿದರೆ, ಇರ್ಫಾಣ್ ಪಠಾಣ್ ಕೇವಲ 19 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 50 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿತು.
253 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 30 ರನ್ಗಳಿಸುವಷ್ಟರಲ್ಲಿ ಆರಂಭಿಕರಾದ ಶಾನ್ ಮಾರ್ಷ್ (2) ಹಾಗೂ ಆರೋನ್ ಫಿಂಚ್ (16) ಪೆವಿಲಿಯನ್ ಸೇರಿದ್ದರು. ಇನ್ನು ಬೆನ್ ಡಂಕ್ 10 ರನ್ ಬಾರಿಸಿದರೆ, ಕ್ಯಾಲಮ್ ಫರ್ಗುಸನ್ 23 ರನ್ಗಳಿಸಲಷ್ಟೇ ಶಕ್ತರಾದರು.
ಹಾಗೆಯೇ ಡೇನಿಯಲ್ ಕ್ರಿಶ್ಚಿಯನ್ ಅವರನ್ನು 18 ರನ್ಗೆ ಔಟ್ ಮಾಡುವಲ್ಲಿ ಹರ್ಭಜನ್ ಸಿಂಗ್ ಯಶಸ್ವಿಯಾದರು. ಅಂತಿಮವಾಗಿ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್ಗಳಿಸಿ 86 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಗೆಲುವಿನೊಂದಿಗೆ ಇಂಡಿಯಾ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಆಸ್ಟ್ರೇಲಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ಆರೋನ್ ಫಿಂಚ್ , ಕ್ಯಾಲಮ್ ಫರ್ಗುಸನ್ , ಬೆನ್ ಕಟಿಂಗ್ , ಡೇನಿಯಲ್ ಕ್ರಿಶ್ಚಿಯನ್ , ಟಿಮ್ ಪೈನ್ (ವಿಕೆಟ್ ಕೀಪರ್) , ಬೆನ್ ಡಂಕ್ , ಬೆನ್ ಲಾಫ್ಲಿನ್ , ಪೀಟರ್ ಸಿಡ್ಲ್ , ಬ್ರೆಟ್ ಲೀ (ನಾಯಕ) ಕ್ಸೇವಿಯರ್ ಡೊಹೆರ್ಟಿ , ನಾಥನ್ ಕೌಲ್ಟರ್-ನೈಲ್.
ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಗುರುಕೀರತ್ ಸಿಂಗ್ ಮಾನ್ , ಸುರೇಶ್ ರೈನಾ , ಅಂಬಟಿ ರಾಯುಡು , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಪವನ್ ನೇಗಿ , ವಿನಯ್ ಕುಮಾರ್ , ಹರ್ಭಜನ್ ಸಿಂಗ್ , ಧವಳ್ ಕುಲಕರ್ಣಿ.