ಬಸ್‌ ಪ್ರಯಾಣಿಕರಿಗೆ ಸಾರಿಗೆ ಸಚಿವರಿಂದ ಗುಡ್‌ ನ್ಯೂಸ್‌ : ʻKSRTCʼ ಟಿಕೆಟ್‌ ದರದಲ್ಲಿ ಏರಿಕೆ ಇಲ್ಲ!

ರಾಜು ಕಾಗೆ ದರ ಏರಿಕೆ ಬಗ್ಗೆ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ತಿಳಿಸಿದರು.

ಬೆಂಗಳೂರು: ಪೆಟ್ರೋಲ್, ಹಾಲಿನ ದರ ಏರಿಕೆ ಬೆನ್ನಲ್ಲೇ ಸಾಮಾನ್ಯ ಜನರು ಪ್ರಯಾಣಿಸುವ ಬಸ್ ಟಿಕೆಟ್‌ ದರ ಏರಿಕೆಯಾಗುತ್ತದೆ ಎಂಬ ಸುದ್ದಿಯಿತ್ತು. ಅದಕ್ಕೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆಯಿಲ್ಲ ಎಂದಿದ್ದಾರೆ.

ವಿಧಾನಸೌಧದಲ್ಲಿ ಇಂದು ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜು ಕಾಗೆ ದರ ಏರಿಕೆ ಬಗ್ಗೆ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ತಿಳಿಸಿದರು.

ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದ ರಾಜು ಕಾಗೆ ಮತ್ತು ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಶ್ರೀನಿವಾಸ್‌ ಅವರು ದರ ಏರಿಕೆಯ ಬಗ್ಗೆ ಮಾತನಾಡಿದ್ದರು.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡೀಸೆಲ್ ಹಾಗೂ ಬಸ್ ಬಿಡಿ ಭಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು.

ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್‌ ದರ ಏರಿಸದೇ ಇದ್ದರೆ ಕೆಎಸ್‌ಆರ್‌ಟಿಸಿ ಸಂಸ್ಥೆ ಉಳಿಯುವುದಿಲ್ಲ. ಸದ್ಯದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು ಶೇಕಡಾ 15ರಿಂದ 20 ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಹೇಳಿದ್ದರು.

Source : https://www.kannadaprabha.com/karnataka/2024/Jul/15/bus-ticket-fare-will-not-increase-in-near-time-says-transport-minister-ramalinga-reddy

 

Leave a Reply

Your email address will not be published. Required fields are marked *