Women’s Asia Cup : ಗ್ರೂಪ್-ಎನಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಸೆಮಿಸ್‌ನಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಸೆಮೀಸ್ನಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
![](https://samagrasuddi.co.in/wp-content/uploads/2024/07/image-177.png)
ಮಂಗಳವಾರ ಡಂಬುಲಾ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ (India vs Nepal) ತಂಡ ಆಲ್ ರೌಂಡ್ ಪ್ರದರ್ಶನ ನೀಡಿ 82 ರನ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನವಾಗಿ ಸೆಮಿಫೈನಲ್ (Semifinal) ಪ್ರವೇಶಿಸಿದೆ. ಭಾರತ ಅಗ್ರಸ್ಥಾನದೊಂದಿಗೆ ಪಾಕಿಸ್ತಾನ (Pakistan) ಕೂಡ ಗ್ರೂಪ್-ಎನಲ್ಲಿ ಸೆಮಿಫೈನಲ್ ತಲುಪಿದೆ. ಗ್ರೂಪ್-ಎಯಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಸೆಮಿಸ್‌ನಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಸೆಮೀಸ್ನಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಭಾರತ ಬಾಂಗ್ಲಾದೇಶ ಅಥವಾ ಥಾಯ್ಲೆಂಡ್ ವಿರುದ್ಧ ಸೆಣಸುವ ಸಾಧ್ಯತೆಗಳಿವೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 48 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 81 ರನ್ಗಳಿಸಿದರು, ಇವರಿಗೆ ಸಾತ್ ನೀಡಿದ ಹೇಮಲತಾ 42 ಎಸೆತ, 5 ಬೌಂಡರಿ, 1 ಸಿಕ್ಸರ್ ಸಹಿತ 47ರನ್ಗಳಿಸಿ ಮಿಂಚಿದರು.
ಶತಕದ ಜೊತೆಯಾಟ
ಆರಂಭಿಕರಾಗಿ ಕಣಕ್ಕಿಳಿದಿದ್ದ ಶೆಪಾಲಿ ಮತ್ತು ಹೇಮಲತಾ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ದಾಖಲಿಸಿದರು. ಇಬ್ಬರೂ 14 ಓವರ್‌ಗಳಲ್ಲಿ 122 ರನ್ ಗಳಿಸಿದರು. ಶೆಫಾಲಿ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದರೆ, ಹೇಮಲತಾ ಆ್ಯಂಕರ್ ಪಾತ್ರ ನಿಭಾಯಿಸಿದರು. ಇದರೊಂದಿಗೆ ಪವರ್‌ಪ್ಲೇಯಲ್ಲಿ ಭಾರತ 50 ರನ್ ಗಳಿಸಿತು. ಆದರೆ, ಪವರ್‌ಪ್ಲೇ ನಂತರ ಹೇಮಲತಾ ಕೂಡ ಗೇರ್ ಬದಲಾಯಿಸಿ ರನ್ ಗಳಿಸಿದರು. 11 ಓವರ್‌ಗಳಲ್ಲಿ ಟೀಂ ಇಂಡಿಯಾ 100 ರನ್‌ಗಳ ಗಡಿ ದಾಟಿತು. ಇನ್ನು ಶೆಫಾಲಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಏಷ್ಯಾಕಪ್ನಲ್ಲಿ ಕಿರಿಯ ವಯಸ್ಸಿನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಹಾಗೂ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಉಳಿದಂತೆ ಸಂಜನಾ 10, ಜೆಮಿಮಾ ರೋಡ್ರಿಗಸ್ ಔಟಾಗದೆ 28 ರನ್ಗಳಿಸಿದರು. ನೇಪಾಳದ ಬೌಲರ್‌ಗಳಲ್ಲಿ ಸೀತಾ ರಾಣಾ 2 ಮತ್ತು ಕಬಿತಾ ಜೋಶಿ ಒಂದು ವಿಕೆಟ್ ಪಡೆದರು.
ಬಳಿಕ ನೇಪಾಳ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 96 ರನ್ ಗಳಿಗೆ ಸೀಮಿತವಾಯಿತು. ಸೀತಾ ರಾಣಾ (18; 22 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ 3, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಪಡೆದರು.