ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 25 : ಭರಮಸಾಗರ ಪಿ.ಡಿ.ಓ. ಶ್ರೀಮತಿ ಕೆ.ಎಸ್.ಶ್ರೀದೇವಿ ಇವರನ್ನು ಈ ಕೂಡಲೇ ಅಮಾನತ್ತು ಮಾಡಿ, ನೌಕರಿಯಿಂದ ವಜಾಗೊಳಿಸುವ ಬಗ್ಗೆ ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಚಿತ್ರದುರ್ಗ ನಗರದಲ್ಲಿ ಗುರುವಾರ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆ ಯನ್ನು ನಡೆಸಿದ ಕರುನಾಡ ವಿಜಯಸೇನೆಯ ಪದಾಧಿಕಾರಿಗಳು ಸರ್ಕಾರದ ವಿರುದ್ದು ಘೋಷಣೆಗಳನ್ನು ಕೂಗಿದರು.
ಹಾಲಿ ಚಿತ್ರದುರ್ಗ ತಾಲ್ಲೂಕು, ಭರಮಸಾಗರ ಹೋಬಳಿ, ಭರಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕೆ.ಎಸ್.ಶ್ರೀದೇವಿ ಇವರು ಪಂಚಾಯಿತಿಯ ಹಣ ದುರುಪಯೋಗ, ಕರ್ತವ್ಯಲೋಪ, ಕಾನೂನುಬಾಹಿರ ಮತ್ತು ಸಾರ್ವಜನಿಕರ ವಿರೋಧಿಯಾಗಿ ಸರ್ಕಾರದ ಹಣವನ್ನು ಬೋಗಸ್ ಬಿಲ್ಲುಗಳನ್ನು ಹಾಕಿ ಲೂಟಿ ಮಾಡಿರುತ್ತಾರೆ. ಇ-ಸೊತ್ತುಗಳಿಗೆ ರಶೀದಿ ಹಾಕದೇ ರಶೀದಿಯ ಹಣವನ್ನು ಸಹ ಗುಳುಂ ಮಾಡಿದ್ದು, ಇವರು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿ, ಹಗಲು ದರೋಡೆ ಮಾಡಿರುತ್ತಾರೆ.
ಇದೇ ರೀತಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಪಂಚಾಯಿತಿಗಳಲ್ಲಿಯೂ ಸಹ ಇದೇ ರೀತಿ ಸಾಕಷ್ಟು ಹಣ ದುರುಪಯೋಗ, ಕರ್ತವ್ಯ ಲೋಪವೆಸಗಿರುತ್ತಾರೆ. ಪಂಚಾಯಿತಿ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಬೆಲೆಕೊಡದೇ ಏಕವಚನದಲ್ಲಿ ಮಾತನಾಡುವುದಲ್ಲದೇ ಅಗೌರವದಿಂದ ನಡೆದುಕೊಂಡು, ಕಛೇರಿಯ ನೌಕರರು, ಸಿಬ್ಬಂದಿಗಳನ್ನು ಬಾಯಿಗೆ ಬಂದಂತೆ ಮಾತನಾಡುವುದು, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆಡಳಿತದಲ್ಲಿ ಬಾರಿ ಅಕ್ರಮ ನಡೆಸುತ್ತಿರುತ್ತಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳು ಇವರ ಮೇಲೆ ಸೂಕ್ತ ಕ್ರಮಜರುಗಿಸುವ ಬಗ್ಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು,ಜಿ.ಪಂ. ಚಿತ್ರದುರ್ಗ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ಚಿತ್ರದುರ್ಗ, ಲೆಕ್ಕಧೀ ಕ್ಷಕರು,ಲೆಕ್ಕಪತ್ರಶಾಖೆ, ಜಿ.ಪಂ. ಚಿತ್ರದುರ್ಗ ಇವರುಗಳಿಗೆ ಕಛೇರಿ ಆದೇಶ ನೀಡಿರುತ್ತಾರೆ. ಆದರೂ ಸಹ ಸದರಿ ಶ್ರೀಮತಿ ಕೆ.ಎಸ್.ಶ್ರೀದೇವಿ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ಹಾಲಿ ಭರಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನೋಡಿದರೆ ತಾ.ಪಂ. ಮತ್ತು ಜಿಲ್ಲಾ ಪಂಚಾಯಿತಿಯ ಕೆಲವು ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಎನ್.ಆರ್.ಇ.ಜಿ.ಎ. ಯೋಜನೆಯಡಿಯಲ್ಲಿ ನೇರಗುಂಟೆ ಗ್ರಾಮ ಪಂಚಾಯಿತಿ ಮತ್ತು ಭರಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ವೆಸಗಿ ಅಮಾನತ್ತುಗೊಂಡಿದ್ದು, ಈ ಪ್ರಕರಣಗಳು ಇನ್ನು ತನಿಖೆಯಲ್ಲಿರುತ್ತವೆ. ಆದ್ದರಿಂದ ಈ ಕೂಡಲೇ ಇಂತಹ ಅಧಿಕಾರಿಗಳಿಂದ ಬೇರೆ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಟ್ಟ ಹೆಸರು ಬಾರದಂತೆ ಸದರಿ ಶ್ರೀಮತಿ ಕೆ.ಎಸ್.ಶ್ರೀದೇವಿ ಇವರನ್ನು ಕೂಡಲೇ ಅಮಾನತ್ತು ಮಾಡಿ, ನೌಕರಿಯಿಂದ ವಜಾ ಮಾಡಿ, ಸೂಕ್ತ ತನಿಖೆ ಕೈಗೊಂಡು ಅಕ್ರಮವಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಹಣವನ್ನು ವಾಪಸ್ಸು ಪಡೆದುಕೊಳ್ಳಲು ಆದೇಶಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದೇ ಹೋದಲ್ಲಿ ದಿನಾಂಕ:೨೯-೦೭-೨೦೨೪ ರಂದು ಜಿಲ್ಲಾ ಪಂಚಾಯಿತಿ ಕಛೇರಿ ಮುಂದೆ ಸಂಘಟನೆಯು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಜಿಲ್ಲಾ ಅಧ್ಯಕ್ಷಿಣಿ ವೀಣಾಗೌರಣ್ಣ, ಜಿಲ್ಲಾ ಪ್ರಧಾನಕಾರ್ಯದರ್ಶಿ ಗೋಪಿನಾಥ.ಎಸ್. ಜಿಲ್ಲಾ ಉಪಾಧ್ಯಕ್ಷ ರತ್ನಮ್ಮ, ನಗರ ಅಧ್ಯಕ್ಷ ಅವಿನಾಶ್, ರಾಜ್ಯ ಸಮಿತಿಯ ನಿಸಾರ್ ಅಹಮದ್ ಜಿಲ್ಲಾ ಸಮಿತಿ ಸುರೇಶ್ ಜಿಲ್ಲಾ ಸಂಚಾಲಕ ಹರೀಶ್ ಕುಮಾರ್.ಪಿ.ಆರ್ ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 0