ಕರುವಿನಕಟ್ಟೆ ವೃತ್ತದಲ್ಲಿ ಉತ್ತಮ ಮಳೆ, ಬೆಳೆ ಮತ್ತು ಜನ -ಜಾನುವಾರುಗಳ ಆರೋಗ್ಯಕ್ಕಾಗಿ “ಹೋಳಿಗೆಮ್ಮಹಬ್ಬ” ಆಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ಸಾರಿಯೂ ಸಹಾ ಹೋಳಿಗೆಮ್ಮನನ್ನು ಆಚರಣೆ ಮಾಡಲಾಯಿತು ಇದು ವಿಶಿಷ್ಟವಾದ ಆಚರಣೆ. ಸಂಪ್ರದಾಯ. ಈ ಹಬ್ಬದ ಆರಣೆಯಿಂದಾಗಿಯೇ ತಾಲೂಕಿನಲ್ಲಿ ಯಾವುದೇ ಭೀಕರ ರೋಗ- ರುಜಿನಗಳು, ಪ್ರಕೃತಿ ವಿಕೋಪಗಳು ನಡೆಯುತ್ತಿಲ್ಲ. ಆ ಕಾರಣ ನಾವೆಲ್ಲರೂ ಜಾತ್ಯತೀತರಾಗಿ ಈ ಹಬ್ಬವನ್ನು ಆಚರಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಹೆಂಗಳೆಯರು.

ಗೃಹಿಣಿಯರು ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ನಾನಾ ರೀತಿ ಅಡುಗೆಗಳನ್ನು ಸಿದ್ಧಪಡಿಸುತ್ತಾರೆ. ಆ ನಂತರ ಮಡಿಕೆಯಲ್ಲಿ ಅವುಗಳೆಲ್ಲವನ್ನೂ ಬೇವಿನ ಎಲೆಯ ಜೊತೆಯಲ್ಲಿ ಇರಿಸಿ, ಪೂಜೆ ಮಾಡುತ್ತಾರೆ. ನಗರದ ಕರುವಿನಕಟ್ಟೆ ವೃತ್ತದಲ್ಲಿನ ದೇವಾಲಯದ ಮುಂದೆ ಮಡಿಕೆಯನ್ನು ಇರಿಸಿ, ದೇವಿಗೆ ನಮಸ್ಕಾರ ಮಾಡಿ, ಪ್ರಾರ್ಥನೆ ಸಲ್ಲಿಸಿ, ನೈವೇದ್ಯ ಮಾಡುವುದು ವಾಡಿಕೆ.ಈ ಆಚರಣೆಯ ಹಿನ್ನೆಲೆ – ಇತಿಹಾಸ ಇಲ್ಲಿನ ಜನರಿಗೆ ತಿಳಿದಿಲ್ಲ. ಆದರೂ ಈ ಹಬ್ಬದ ಆಚರಣೆ ತಪ್ಪಿಲ್ಲ, ಯಾರೂ ಕೈ ಬಿಟ್ಟಿಲ್ಲ. ಪ್ರತೀ ವರ್ಷ ತಪ್ಪದೇ ನಿಗದಿತ ದಿನದಂದು, ನಕ್ಷತ್ರ-ತಿಥಿ ಆಧರಿಸಿ ಆಚರಣೆ ಆಗುತ್ತಿದೆ. ಜೂನ್ ೩೦ರ ಇಂದು ಮಂಗಳವಾರ ಹೋಳಿಗೆಯಮ್ಮ ಹಬ್ಬವನ್ನು ಊರವರು ಅದ್ಧೂರಿಯಾಗಿ ಮನೆ ಮನೆಯಲ್ಲೂ ಆಚರಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *