‘ನಿಮ್ಮ ಶ್ರಮಕ್ಕೆ ಫಲ ಸಿಕ್ಕಿದೆ’; ಕಂಚು ಗೆದ್ದ ಸರಬ್ಜೋತ್​ ಸಾಧನೆಗೆ ಮೋದಿ ಮೆಚ್ಚುಗೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಶೂಟಿಂಗ್​ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದ ಮನು ಭಾಕರ್ ಇದೀಗ ಎರಡನೇ ಪದಕಕ್ಕೆ ಕೊರಳೊಡ್ಡಿದ್ದಾರೆ. ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ ಮಂಗಳವಾರ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಈ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಮನು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಭಾರತೀಯ ಅಥ್ಲೀಟ್‌ಗಳ ಈ ಐತಿಹಾಸಿಕ ಸಾಧನೆಯ ನಂತರ ಪ್ರಧಾನಿ ಮೋದಿ ಅವರು ಸರಬ್ಜೋತ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು, ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಕೀರ್ತಿ ತಂದಿದ್ದೀರಿ

ಸರಬ್ಜೋತ್ ಸಿಂಗ್ ಹಾಗೂ ಮನು ಭಾಕರ್ ಕಂಚಿನ ಪದಕ ಗೆದ್ದ ಬಳಿಕ ಸರಬ್ಜೋತ್ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ‘ದೇಶಕ್ಕೆ ಕೀರ್ತಿ ಮತ್ತು ಗೌರವವನ್ನು ತಂದಿದ್ದೀರುವ ನಿಮಗೆ ಅಭಿನಂದನೆಗಳು. ನಿಮ್ಮ ಶ್ರಮಕ್ಕೆ ಫಲ ಸಿಕ್ಕಿದೆ. ಮನು ಅವರಿಗೂ ನನ್ನ ಅಭಿನಂದನೆಗಳು ಎಂದರು’. ಇದರ ನಂತರ ಮಾತನಾಡಲು ಆರಂಭಿಸಿದ ಸರಬ್ಜೋತ್, ‘ನಾನು ಪದಕದ ಸುತ್ತಿಗೆ ತೀರ ಹತ್ತಿರ ಬಂದು ಸೋತೆ, ಆದರೆ ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ’ ಎಂದರು.

ಇದಾದ ನಂತರ ಮಾತು ಮುಂದುವರೆಸಿದ ಪ್ರಧಾನಿ ಮೋದಿ, ‘ನೀವು ತಂಡವಾಗಿ ಉತ್ತಮ ಪ್ರದರ್ಶನ ನೀಡಲು ಕಾರಣವೇನು?’ ಎಂಬ ಪ್ರಶ್ನೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸರಬ್ಜೋತ್, ‘ನಾವು 2019 ರಿಂದ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆಲ್ಲುತ್ತಿದ್ದೇವೆ. ಜೂನಿಯರ್ ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಇದು ನಮಗೆ ಪದಕ ಗೆಲ್ಲಲು ಸಹಾಯ ಮಾಡಿತು’ ಎಂದರು. ಪ್ರಧಾನಿ ಮೋದಿ ಮುಂದುವರೆದು, ‘ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ತೊಡಗಿಸಿಕೊಂಡಿದ್ದೀರಿ. ಭವಿಷ್ಯದಲ್ಲಿಯೂ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ’ ಎಂದರು.

ಮನುಗೆ ನನ್ನ ಶುಭಾಶಯ ತಿಳಿಸಿ

ಇದಾದ ನಂತರ ಪ್ರಧಾನಿ ಮೋದಿ ಅವರು ಸರಬ್ಜೋತ್ ಅವರ ಬಳಿ ಮನು ಎಲ್ಲಿ ಹೋಗಿದ್ದಾರೆ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸರಬ್ಜೋತ್, ‘ಅವರ ಡೋಪ್ ಪರೀಕ್ಷೆ ಇನ್ನೂ ನಡೆಯುತ್ತಿದೆ. ಹೀಗಾಗಿ ಅಲ್ಲಿದ್ದಾರೆ’ ಎಂದರು. ‘ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ಹಾಗೆಯೇ ಎಲ್ಲಾ ಆಟಗಾರರಿಗೆ ಶುಭಾಶಯಗಳನ್ನು ತಿಳಿಸಿ’ ಎಂದು ಪ್ರಧಾನಿ ಮೋದಿ ತಮ್ಮ ಮಾತು ಮುಗಿಸಿದರು.

ಕೊರಿಯಾ ತಂಡಕ್ಕೆ ಸೋಲುಣಿಸಿದ ಭಾರತದ ಜೋಡಿ

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಮನು ಮತ್ತು ಸರಬ್ಜೋತ್ ಜೋಡಿ ಕೊರಿಯಾ ತಂಡವನ್ನು 16-10 ಅಂತರದಿಂದ ಸೋಲಿಸಿತು. ಈ ಐತಿಹಾಸಿಕ ವಿಜಯಕ್ಕಾಗಿ ಪ್ರಧಾನಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಅಭಿನಂದಿಸಿದ್ದಾರೆ. ‘ನಮ್ಮ ಶೂಟರ್‌ಗಳು ನಿರಂತರವಾಗಿ ನಮ್ಮನ್ನು ಹೆಮ್ಮೆಪಡಿಸುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು. ಇಬ್ಬರೂ ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರಿದ್ದಾರೆ. ಭಾರತವು ತುಂಬಾ ಸಂತೋಷವಾಗಿದೆ. ಮನು ಅವರಿಗೆ, ಇದು ಅವರ ಸತತ ಎರಡನೇ ಒಲಿಂಪಿಕ್ ಪದಕವಾಗಿದೆ, ಇದು ಅವರ ಮುಂದುವರಿದ ಶ್ರೇಷ್ಠತೆ ಮತ್ತು ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

Source : https://tv9kannada.com/sports/paris-olympics-2024-pm-narendra-modi-spoke-to-olympics-bronze-medalist-sarabjot-singh-psr-874967.html

Leave a Reply

Your email address will not be published. Required fields are marked *