ಚಿತ್ರದುರ್ಗದಲ್ಲಿ  “ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ” ಪ್ರತಿರೋಧ ಕಂಪನಿ ಭೂತಗಳ ದಹನ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 09 : “ಬ್ರಿಟೀಷರೇ ಭಾರತ ಬಿಟ್ಟು ತೊಲಗಿ” ಕರೆ ನೀಡಿದ ಆ. 9ರ ದಿನದಂದು” “ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ” ಪ್ರತಿರೋಧ ಕಂಪನಿ ಭೂತಗಳ ದಹನ ಕಾರ್ಯಕ್ರಮವನ್ನು ಸಂಯುಕ್ತ ಹೋರಾಟ-ಕರ್ನಾಟಕ ಕರೆಯ ಮೇರೆಗೆ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಪದಾಧಿಕಾರಿಗಳು, ದಾರಿಯುದ್ದಕ್ಕೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಈಚಘಟ್ಟದ ಸಿದ್ದವೀರಪ್ಪ,  ಅಭಿವೃದ್ಧಿಯ ಹೆಸರಿನಲ್ಲಿ ರೈತರ ಲಕ್ಷಾಂತರ ಎಕರೆ ಭೂಮಿಗಳನ್ನು ವಶಪಡಿಸಿಕೊಂಡು ಕಂಪನಿಗಳಿಗೆ ನೀಡಲಾಗಿದೆ. ಖಾಸಗೀಕರಣದ ಹೆಸರಿನಲ್ಲಿ ನೂರಾರು ಸಾರ್ವಜನಿಕ ಉದ್ದಿಮೆಗಳನ್ನು ದುಗ್ಗಾಣಿ ಬೆಲೆಗೆ ಕಂಪನಿಗಳಿಗೆ ನೀಡಲಾಗಿದೆ. ಮಾಲ್‍ಗಳ ಮೂಲಕ ಚಿಲ್ಲರೆ ವ್ಯಾಪಾರಕ್ಕೂ ಕಂಪನಿಗಳಿಗೆ ಕಾಲಿಡಲು ಅವಕಾಶ ಕೊಟ್ಟು ಸಣ್ಣ ವ್ಯಾಪಾರಸ್ಥರನ್ನು ಮುಳುಗಿಸಲಾಗುತ್ತಿದೆ. ಭೂ ಕಾಯ್ದೆ ತಿದ್ದುಪಡಿ ಮೂಲಕ ರೈತರ ಭೂಮಿಯನ್ನು ಬಾಚಲು ಹೊರಟಿದ್ದಾರೆ. ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆಳೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಹೊರಟಿದ್ದಾರೆ. ಕಂಪನಿಗಳ ಮೇಲಿನ ತೆರಿಗೆ ದರವನ್ನು ಇಳಿಸಲಾಗುತ್ತಿದೆ. ಜಿ.ಎಸ್.ಟಿ – ಸೆಸ್ ರೂಪಗಳಲ್ಲಿ ಜನಸಾಮಾನ್ಯರನ್ನು ಸುಲಿಯಲಾಗುತ್ತಿದೆ ಎಂದು ದೂರಿದರು.

ರೈತ ಮುಖಂಡ ಭೂತಯ್ಯ ಮಾತನಾಡಿ, ಜನಸಾಮಾನ್ಯರ ಬದುಕು ಕುಸಿಯುತ್ತಿದೆ. ಆದರೆ ಬಂಡವಾಳಿಗರ ಆದಾಯ, ಆಸ್ತಿ ವ್ಯವಹಾರ ಏರುತ್ತಿದೆ. ದೇಶದ ಮೂರನೇ ಒಂದು ಭಾಗದಷ್ಟು ಆಸ್ತಿ ದೇಶದ ಕೇವಲ 1% ಜನರ ಕೈಗಳಲ್ಲಿದೆ. ಈ ಅವಧಿಯಲ್ಲಿ ಬಹು ಕೋಟ್ಯಾಧೀಶರ ಸಂಖ್ಯೆ 56 ರಿಂದ 169ಕ್ಕೆ ಏರಿದೆ. ಮೋದಿ ಅವರ ಪರಮಾಪ್ತರಾದ ಆದಾನಿ ಹಾಗೂ ಅಂಬಾನಿ ಇಂದು ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿದ್ದಾರೆ. ಆದಾನಿ ಆಸ್ತಿ 2013ರಲ್ಲಿ 25,792ರೂ. ಕೋಟಿ ಇದ್ದದ್ದು 2022ರ ಹೊತ್ತಿಗೆ 7,48,800ರೂ. ಕೋಟಿ ಆಯಿತು. ಅಂದರೆ ಈ ಅವಧಿಯಲ್ಲಿ 30ಪಟ್ಟು ಹೆಚ್ಚಾಗಿದೆ. ಅಂಬಾನಿ ಆಸ್ತಿ 2014ರಲ್ಲಿ 1,54,742ರೂ. ಕೋಟಿ ಇದ್ದದ್ದು 2022ರ ಹೊತ್ತಿಗೆ 7.54.620ರೂ. ಕೋಟಿ ಆಗಿದೆ. ಅಂದರೆ 5 ಪಟ್ಟು ಹೆಚ್ಚಾಗಿದೆ. ಅಭಿವೃದ್ಧಿಯ ಮುಖವಾಡದಲ್ಲಿ ನಡೆಯುತ್ತಿರುವ ದೇಶದ ಕೊಳ್ಳೆಯನ್ನು,ಜನಸಾಮಾನ್ಯರ ಸುಲಿಗೆಯನ್ನು ನಾವು ಪ್ರತಿರೋಧಿಸಬೇಕಿದೆ.ಕಂಪನಿಗಳಕೈಗೊಂಬೆಗಳಾಗಿರುವ, ಅವುಗಳ ಕಮಿಷನ್ ಏಜೆಂಟ್ ಗಳಾಗಿರುವ ಸರ್ಕಾರಗಳನ್ನು ಎಚ್ಚರಿಸಬೇಕಿದೆ. ಪಾಠ ಕಲಿಸಬೇಕಿದೆ. ಈ ವಾಸ್ತವವನ್ನು ಜನಸಾಮಾನ್ಯರ ಗಮನಕ್ಕೆ ತರಲು ಪ್ರತಿರೋಧ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು.

ಕೃಷಿಯ ಮೇಲಿನ ಕಾರ್ಪೋರೇಟ್ ಆಕ್ರಮಣ ನಿಲ್ಲಲಿ, ರೈತರ ಬೆಳೆಗಳಿಗೆ ಎಂ.ಎಸ್.ಪಿ ಖಾತ್ರಿಯಾಗಲಿ, ರೈತರ ಹಾಗೂ ಜನಸಾಮಾನ್ಯರ ಬದುಕಿಗೆ ಕಂಟಕವಾಗಿರುವ ವಿದ್ಯುತ್ ಖಾಸಗೀಕರಣ ರಾಗಬೇಕು. ಕಂಪನಿಗಳ ಹಿತಕಾಯಲು ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕೋಡ್‍ಗಳು ರದ್ದಾಗಬೇಕು ಉದ್ಯೋಗ ಭದ್ರತೆ ದೇಶದ ನೀತಿಯಾಗಬೇಕು. ಹಿತ್ತಲ ಬಾಗಿಲಿನಿಂದ ನುಗ್ಗಿ ಮೀಸಲಾತಿಯನ್ನು ಸರ್ವನಾಶ ಗೊಳಿಸುತ್ತಿರುವ ಕಾರ್ಪೋರೇಟ್ ಪರ ಖಾಸಗೀಕರಣಕ್ಕೆ ಧಿಕ್ಕಾರವಿದೆ. ಖಾಸಗಿ ಕ್ಷೇತ್ರದಲ್ಲು ಮೀಸಲಾತಿ ಜಾರಿಯಾಗಬೇಕು. ಲಾಭದ ದುರಾಸೆಗಾಗಿ ಮಹಿಳೆಯನ್ನು ಭೋಗದ ವಸ್ತುವಂತೆ ಬಿಂಬಿಸಿ ಅತ್ಯಾಚಾರಗಳ ಸರಮಾಲೆಗೆ ಕಾರಣವಾಗಿರುವ ಕಾರ್ಪೋರೇಟ್ ಸಂಸ್ಕೃತಿ ನಾಶವಾಗಬೇಕು. ಸಣ್ಣ-ಮಧ್ಯಮ ಉದ್ದಿಮಗಳನ್ನು ಸರ್ವನಾಶಗೊಳಿಸಿ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿರುವ ಕಾರ್ಪೋರೇಟ್ ಕಂಪನಿಗಳಿಗೆ ಕಡಿವಾಣ ಬೀಳಬೇಕು. ವಯನಾಡು ಭೂ ಕುಸಿತ, ಅತ್ತಿವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳಿಗೆ ದೇಶವನ್ನು ತಳ್ಳುತ್ತಿರುವ ಕಾರ್ಪೋರೇಟ್ ಮಾದರಿ ಅಭಿವೃದ್ಧಿ ಕೊನೆಗೊಳ್ಳಲಿ ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಕುಮಾರ್ ಸಮತಳ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೋರಕೇರಪ್ಪ, ಮಲ್ಲಿಕಾರ್ಜನ್, ಧನಂಜಯ, ಹಂಪಣ್ಣ, ಷಫಿವುಲ್ಲಾ, ಶಿವರುದ್ರಪ್ಪ, ಸಿದ್ದೇಶ್, ಶಿವಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತಿಕೃತಿಗಾಗಿ ಕಿತ್ತಾಟ : ಈ ಪ್ರತಿಭಟನೆಯ ಸಮಯದಲ್ಲಿ ಪ್ರತಿಭಟನಾಕಾರರು ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ” ಪ್ರತಿರೋಧ ಕಂಪನಿ ಭೂತಗಳ ದಹನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿದ ನಂತರ ತಾವು ತಂದಿದ್ದ ಪ್ರತಿಕೃತಿಯನ್ನು ದಹನ ಮಾಡಲು ಪ್ರತಿಭಟನಾಕಾರರು ಮುಂದಾದರು ಈ ಸಮಯದಲ್ಲಿ ಅಲ್ಲಿದ್ದ ಪೋಲಿಸರು ಇದಕ್ಕೆ ಅವಕಾಶವನ್ನು ನೀಡದೆ ಅದನ್ನು ಕಿತ್ತುಕೊಳ್ಳುವುದಕ್ಕೆ ಮುಂದಾದರು ಆದರೂ ಸಹಾ ಪ್ರತಿಭಟನಾಕಾರರು ಅದನ್ನು ನೀಡದೆ ಅದಕ್ಕೆ ಬೆಂಕಿಯನ್ನು ಹಚ್ಚುವ ಕಾರ್ಯವನ್ನು ಮಾಡಲು ಮೂಂದಾದರು ಇಷ್ಠಾದರೂ ಸಹಾ ಪೋಲಿಸರು ಗೊಂಬೆಯನ್ನು ಕಿತ್ತುಕೊಳ್ಳುವ ಕಾರ್ಯವನ್ನು ಮಾತ್ರ ಬಿಡಲಿಲ್ಲ ಇದೇ ರೀತಿ ಪ್ರತಿಭಟನಾಕಾರರು ಸಹಾ ಗೊಂಬೆಯನ್ನು ನೀಡಲು ಮುಂದಾಗಲಿಲ್ಲ, ಅಂತು ಇಂತು ಕೊನೆಗೆ ಪೋಲಿಸರು ಪ್ರತಿಭಟನಾಕಾರರ ಬಳಿ ಇದ್ದ ಗೊಂಬೆಯನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿಂದಚ ಅದನ್ನು ಆಟೋದಲ್ಲಿ ಬೇರೆ ಕಡೆಗೆ ಸಾಗಿಸಲಾಯಿತು. ಇದಾದಮೇಲೆ ಪೋಲಿಸರು, ಪ್ರತಿಬಟನಾಕಾರರ ಮಧ್ಯೆ ಗೊಂಬೆ ಕಿತ್ತಾಟದಲ್ಲಿ ನೆಲದಲ್ಲಿ ಬಿದ್ದಿದ್ದೆ ಹುಲ್ಲಿಗೆ ಪ್ರತಿಭಟನಾಕಾರರು ಬೆಂಕಿಯನ್ನು ಹಚ್ಚುವುದರ ಮೂಲಕ ತಮ್ಮ ಆಕ್ರೋಶವನ್ನು ತೀರಿಸಿಕೊಂಡರು.

Leave a Reply

Your email address will not be published. Required fields are marked *