Bus Fare Hike: ಬಿಜೆಪಿ ಸರ್ಕಾರದಲ್ಲಿ ಆದ ಟಿಕೆಟ್ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. 2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್ ಪ್ರಯಾಣ ದರ ಶೇ. 10.5 ಏರಿಕೆ ಅಗಿತ್ತು. 2020 ರಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಬಸ್ ಪ್ರಯಾಣ ದರ ಶೇ.12 ಹೆಚ್ಚಳವಾಗಿದೆ. ನೀವು ಕ್ಯಾಬಿನೆಟ್ ಮಂತ್ರಿಯಾಗಿದ್ದಾಗ ಸಮಿತಿಯ ವರದಿಯನ್ನು ಯಾಕೆ ತಿರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ರಾಜ್ಯ ಸರ್ಕಾರ, ಇದೀಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ ಎಂಬ ವಿಪಕ್ಷನಾಯಕ ಆರ್.ಅಶೊಕ್ ಅವರ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದು, ಟಿಕೆಟ್ ದರ (Bus Fare Hike) ಏರಿಕೆ ಏಕೆ ಅನಿವಾರ್ಯ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ಅಶೋಕ್ ರವರೇ, ನೀವು ಸಾರಿಗೆ ಸಚಿವರಾಗಿದ್ದವರು, ಸಾರಿಗೆ ಸಂಸ್ಥೆಗಳ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿದ್ದಾರಾ ಎಂದರೆ ಆಶ್ಚರ್ಯವಾಗುತ್ತಿದೆ. 2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್ ಪ್ರಯಾಣ ದರ ಶೇ.10.5 ಏರಿಕೆ ಮಾಡಿರುವುದು ಮರೆತುಬಿಟ್ಟಿದ್ದೀರಾ? 2020ರಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಬಸ್ ಪ್ರಯಾಣ ದರ ಶೇ.12 ಹೆಚ್ಚಳ ಮಾಡಿದಾಗ ನೀವು ಕ್ಯಾಬಿನೆಟ್ ಮಂತ್ರಿಯಾಗಿದ್ದರಲ್ಲವೇ? ಆಗ ಯಾಕೆ ವಿರೋಧ ವ್ಯಕ್ತ ಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
2021ರ ನ.15ರಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸಮಿತಿಯನ್ನು ತಮ್ಮದೇ ಬಿ.ಜೆ.ಪಿ ಸರ್ಕಾರ ರಚಿಸಿತ್ತು. ಅನೇಕ ಶಿಫಾರಸುಗಳೊಂದಿಗೆ ಪ್ರಮುಖವಾಗಿ, ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ಸದರಿ ಸಮಿತಿಯು ವರದಿ ನೀಡಿದ್ದು, ನೀವು ಕ್ಯಾಬೆನೆಟ್ ಮಂತ್ರಿಯಾಗಿದ್ದಾಗ ಯಾಕೆ ಈ ವರದಿಯನ್ನು ತಿರಸ್ಕರಿಸಲಿಲ್ಲ. ತಮ್ಮದೇ ಸರ್ಕಾರ ಅಂಗೀಕಾರ ಮಾಡಿದ ವರದಿಯನ್ನು ಈಗ ಸರಿಯಿಲ್ಲವೆಂದು ಹೇಳಲು ಹೊರಟ್ಟಿದ್ದೀರಾ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರವು 2000ರ ಸೆ.30ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಎಚ್ಟಿಡಿ/85/ಟಿಆರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ತಮಗೆ ಇಲ್ಲವೇ? ತಮ್ಮದೇ ಬಿ.ಜೆ.ಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು 5900 ಕೋಟಿ ರೂ. ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ರಾಜಕೀಯವೇ ಮುಖ್ಯ. ಸಾರಿಗೆ ಸಂಸ್ಥೆಗಳು ಉಳಿದರೇನು? ಮುಳುಗಿದರೆ ನನಗೇನು? ಅನ್ನುವ ಮನಸ್ಥಿತಿಯೇ ತಿಳಿಯದಾಗಿದೆ. ಅಶೋಕ್ ರವರೇ ತಾವು ಕೂಡ ಸರ್ಕಾರದ ಭಾಗವಾಗಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಇಂದು ಮರೆಮಾಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಬಸ್ ದರ ಏರಿಕೆಗೆ ಹೊಸ ಆಯೋಗ, ಪಿಕ್ ಪಾಕೆಟ್ ಸರ್ಕಾರದ ಹೊಸ ಪ್ರಯೋಗ: ಆರ್.ಅಶೋಕ್
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ನಿರ್ಧರಿಸುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಮಾದರಿಯಲ್ಲೇ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆಗೆ ಪ್ರತ್ಯೇಕ ನಿಯಂತ್ರಣ ಆಯೋಗ ಕೆಟಿಆರ್ಸಿ ಸರ್ಕಾರ ಮುಂದಾಗಿದೆ. ಇದಕ್ಕೆ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ. ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದು ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರು ಎಂದು ಆಕ್ರೋಶ ಹೊರಹಾಕಿದ್ದಾರೆ.