ಬೆಂಗಳೂರಲ್ಲಿ ಬೀದಿನಾಯಿಗಳ ದಾಳಿ; ವಾಕಿಂಗ್‌ಗೆ ಬಂದು ಜೀವಬಿಟ್ಟ ಮಹಿಳೆ.

ಬೆಂಗಳೂರು, ಆಗಸ್ಟ್‌ 28: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಗೆ ಇನ್ನೂ ಬ್ರೇಕ್‌ ಬಿದ್ದಿಲ್ಲ. ಇದರ ಪರಿಣಾಮ ಆಗಾಗ ಬೀದಿನಾಯಿಗಳಿಂದ ಅನಾಹುತಗಳು ಸಂಭವಿಸುತ್ತಲೇ ಇವೆ. ಇಂದು ಕೂಡ ತಣ್ಣಗಿದ್ದ ಉದ್ಯಾನನಗರಿಯಲ್ಲಿ ಬೆಳ್ಳಂಬೆಳಿಗ್ಗೆ ದೊಡ್ಡ ದುರಂತವೇ ನಡೆದು ಹೋಗಿದೆ. ಹೊರ ರಾಜ್ಯದಿಂದ ಮಗಳನ್ನು ಕಾಣಲೆಂದು ಬೆಂಗಳೂರಿಗೆ ಬಂದಿದ್ದ ಮಹಿಳೆ ನಾಯಿಗಳ ಉಪಟಳಕ್ಕೆ ಜೀವವನ್ನೇ ಕಳೆದುಕೊಂಡಿದ್ದಾರೆ.

ಬೀದಿನಾಯಿಗಳ ಗುಂಪೊಂದು ಭೀಕರವಾಗಿ ಎರಗಿದ ಪರಿಣಾಮ ವಾಕಿಂಗ್‌ ಮಾಡಲು ಮನೆಯಿಂದ ಹೊರ ಬಂದಿದ್ದ ಈ ಮಹಿಳೆ ಮಸಣ ಸೇರಿದ್ದಾರೆ. ಈ ಘಟನೆಯು ಬೆಂಗಳೂರಿನ ಜಾಲಹಳ್ಳಿ ಬಳಿಯ ಏರ್‌ಫೋರ್ಸ್‌ ಕ್ಯಾಂಪಸ್‌ನಲ್ಲಿ ನಡೆದಿದೆ. 60 ವರ್ಷದ ಮಹಿಳೆಯೊಬ್ಬರು ಕ್ಯಾಂಪಸ್‌ನಲ್ಲಿ ಇಂದು ಬೆಳಿಗ್ಗೆ ವಾಕಿಂಗ್‌ ಮಾಡಲು ಬಂದಿದ್ದಾಗ ವ್ಯಾಘ್ರವಾಗಿ ನಾಯಿಗಳ ಹಿಂಡು ದಾಳಿ ನಡೆಸಿದೆ. ಈ ಘಟನೆಯಲ್ಲಿ ಮಹಿಳೆಯ ತಲೆ, ಕೈ, ಕತ್ತು ಸೇರಿದಂತೆ ದೇಹದ ಭಾಗಗಳಿಗೆ ಗಂಭೀರವಾದ ಗಾಯಗಳಾಗಿವೆ ಎಂದು ವರದಿಯಾಗಿದೆ.ಸುಮಾರು 60 ವರ್ಷದ ಮಹಿಳೆ ಕ್ಯಾಂಪಸ್‌ನಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭ 7-8 ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಪರಿಣಾಮ ಮಹಿಳೆಯ ತಲೆ ಹಿಂಭಾಗ, ಮುಖ, ಕೈ ಹಾಗೂ ಕತ್ತಿನ ಭಾಗದಲ್ಲಿ ಗಂಭೀರವಾಗಿ ಗಾಯವಾಗಿದೆ. ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾರೆ.ಮೃತ ಮಹಿಳೆಯ ಅಳಿಯ ಭಾರತೀಯ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬಹುದಿನಗಳ ನಂತರ ಅಳಿಯ-ಮಗಳನ್ನು ಕಣ್ತುಂಬಿಕೊಂಡು ಬರೋಣ ಎಂದು ದೂರದ ಬಿಹಾರದಿಂದ ಇವರು ಬೆಂಗಳೂರಿಗೆ ಬಂದಿಳಿದ್ದಿದ್ದರು.

ಇಂದು ಮುಂಜಾನೆ ಕ್ಯಾಂಪಸ್‌ನಲ್ಲಿ ವಾಕಿಂಗ್‌ ಮಾಡಿ ಬರೋಣ ಎಂದು ಮನೆಯಿಂದ ಹೊರ ಬಂದಿದ್ದಾಗ ಈ ದುರ್ಘಟನೆ ನಡೆದು ಹೋಗಿದೆ.ನಾಯಿಗಳು ಗುಂಪಾಗಿ ಅಟ್ಯಾಕ್‌ ಮಾಡಿದ್ದರಿಂದ ಮಹಿಳೆ ಪಾರಾಗಲು ಸಾಧ್ಯವಾಗಲಿಲ್ಲ. ಈ ಘಟನೆ ನಡೆದಾಗ ಅಲ್ಲಿ ರಕ್ಷಣೆಗೂ ಯಾರೂ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಮಹಿಳೆ ಅಸಹಾಯಕರಾಗಿ ಪ್ರಾಣ ಕಳೆದುಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ. ಸ್ಥಳೀಯರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆಯ ದೇಹದ ಭಾಗಗಳನ್ನು ನಾಯಿಗಳು ಭೀಕರವಾಗಿ ಕಚ್ಚಿದ್ದವು ಎಂದು ಹೇಳಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ, ನಾಯಿಗಳ ದಾಳಿಯಿಂದ ನರಳಿದ್ದ ಮಹಿಳೆ ಇಹಲೋಕವೇ ತ್ಯಜಿಸಿದ್ದಾರೆ. ಮೃತದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಹಿಂದೆಯೂ ಇದೇ ಕ್ಯಾಂಪಸ್‌ನಲ್ಲಿ ನಾಯಿಗಳ ದಾಳಿ ನಡೆದಿತ್ತು ಎಂದು ಹೇಳಲಾಗುತ್ತಿದೆ.ಈ ಘಟನೆಯು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ರಾತ್ರಿ ವೇಳೆಯೂ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಬೀದಿನಾಯಿಗಳ ಆತಂಕವಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಬೀದಿನಾಯಿಗಳಿಗೆ ಹೆದರಿ ಮನೆಯಿಂದ ಹೊರ ಬರಲು ಸಾಧ್ಯವಾಗದ ಸ್ಥಿತಿಯೂ ಕೆಲವೆಡೆ ಇದೆ. ಮಕ್ಕಳು, ವಯಸ್ಸಾದವರಿಗೆ ಇದರಿಂದ ಭಾರಿ ಸಮಸ್ಯೆಯಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ಬೀದಿನಾಯಿಗಳ ಉಪಟಳಕ್ಕೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Source : https://kannada.oneindia.com/news/bengaluru/a-woman-who-was-walking-in-bangalore-was-attacked-by-stray-dogs-372577.html

Leave a Reply

Your email address will not be published. Required fields are marked *