ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಅಭಿಮಾನಿಗಳಿಗಾಗಿ ನಟನ ಮುಂದಿನ ಚಿತ್ರಗಳ ಮಾಹಿತಿ ಸಿಗಲಿದೆ.
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಸಿನಿಮಾ ತೆರೆಕಂಡು ಎರಡು ವರ್ಷಗಳಾಯ್ತು. ಕೊನೆಯದಾಗಿ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಮುಂದಿನ ದಿನಗಳಲ್ಲಿ ಹೆಬ್ಬುಲಿಯ ಯಾವ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಮೂರು ಬಿಗ್ ಅನೌನ್ಸ್ಮೆಂಟ್ಗಳಿವೆ. ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಅಭಿಮಾನಿಗಳಿಗಾಗಿ ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕರಿಂದ ಸ್ಪೆಷಲ್ ನ್ಯೂಸ್ ಇದೆ.
ಹೌದು, ವಿಕ್ರಾಂತ್ ರೋಣ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಅವರು ಕಿಚ್ಚ ಸುದೀಪ್ ಜೊತೆ ಮತ್ತೊಂದು ಸಿನಿಮಾ ಮಾಡೋದು ಫಿಕ್ಸ್. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದ ವಿಕ್ರಾಂತ್ ರೋಣ ಚಿತ್ರವು ಅದ್ಧೂರಿ ಮೇಕಿಂಗ್ ಸಲುವಾಗಿ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲೂ ಕಮಾಲ್ ಮಾಡಿದ್ದ ಚಿತ್ರ ನಿರ್ದೇಶನಾ ಶೈಲಿ ಮತ್ತು ಥ್ರಿಲ್ಲರ್ ಕಥೆಯಿಂದಾಗಿ ಸಿನಿಪ್ರಿಯರಿಂದ ಮೆಚ್ಚುಗೆ ಸಂಪಾದಿಸಿತ್ತು. ನಂತರ, ಸುದೀಪ್ ಅವರು ನಿರ್ದೇಶಕ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಅದುವೇ ‘ಬಿಲ್ಲ ರಂಗ ಭಾಷ’ ಸಿನಿಮಾ.
ಸುದೀಪ್ ಆಪ್ತರೋರ್ವರ ಪ್ರಕಾರ, ಕೆಲ ದಿನಗಳ ಹಿಂದೆ ಚಿತ್ರದ ಅದ್ಧೂರಿ ಫೋಟೋಶೂಟ್ ಮಾಡಲಾಗಿದೆ. ಸುದೀಪ್ ಜನ್ಮದಿನದಂದು ಚಿತ್ರದ ಮೊದಲ ನೋಟ ಅನಾವರಣಗೊಳ್ಳಲಿದೆಯಂತೆ. ‘ಬಿಲ್ಲ ರಂಗ ಭಾಷ’ ಪಕ್ಕಾ ಮಾಸ್ ಎಂಟರ್‌ಟೈನ್ಮೆಂಟ್ ಚಿತ್ರ. ಪಾಚೀನ ಕಾಲದ ರಾಜನೋರ್ವನ ಕಥೆಯಾಗಿದ್ದು, ಸುದೀಪ್ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನೂಪ್ ಈ ಕಥೆಯನ್ನು 18 ವರ್ಷಗಳ ಹಿಂದೆಯೇ ಸಿದ್ಧಪಡಿಸಿಕೊಂಡಿದ್ದರಂತೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರ ಬ್ಯಾನರ್ ‘ಸುಪ್ರಿಯಾನ್ವಿ’ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುವ ಬಗ್ಗೆ ಈ ಹಿಂದೆ ಮಾತುಕತೆ ಆಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಸುದೀಪ್ ಬರ್ತ್ಡೇ ಟೀಸರ್ನಿಂದಲೇ ಕೌತುಕ ಹುಟ್ಟಿಸಿರೋ ‘ಮ್ಯಾಕ್ಸ್’ ಯಾವಾಗ ಬಿಡುಗಡೆ ಅನ್ನೋ ಕುತೂಹಲ ಸಾಕಷ್ಟು ಅಭಿಮಾನಿಗಳಲ್ಲಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಕಿಚ್ಚನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಆಗಿ ಚಿತ್ರತಂಡ ನೀಡಲಿದೆ. ಟೀಸರ್ನಲ್ಲಿನ ಸುದೀಪ್ ಅವರ ಡೈಲಾಗ್ಸ್, ಆಕ್ಷನ್ ಸೀಕ್ವೆನ್ಸ್ ‘ಮ್ಯಾಕ್ಸ್’ ಮೇಲಿನ ಕುತೂಹಲ ಹೆಚ್ಚಿಸಿದೆ.
ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, ಕಾಲಕೇಯ ಪ್ರಭಾಕರ್, ಪ್ರಮೋದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಸೇರಿದಂತೆ ಹಲವರು ನಟಿಸಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ಅವರ ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 50 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಸುದೀಪ್ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ಹಿನ್ನೆಲೆ ಸಿನಿಮಾ ಸುತ್ತಲಿನ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ.
ಮ್ಯಾಕ್ಸ್ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ತಮಿಳುನಾಡಿನ ಮಹಾಬಲಿಪುರಂ ಬಳಿ ಹಾಕಿದ್ದ ಬೃಹತ್ ಸೆಟ್‌ನಲ್ಲಿ ಮಾಡಲಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿರುವ ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಇನ್ನು ಕಿಚ್ಚನ ಬರ್ತ್ಡೇಗೆ ಮೂರನೇ ಸ್ಪೆಷಲ್ ಗಿಫ್ಟ್ ಅಂದ್ರೆ ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಲಿರುವ ಚಿತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದರ ಜೊತೆಗೆ ಹೊಸ ನಿರ್ಮಾಪಕರು ಕಿಚ್ಚನ ಜೊತೆ ಸಿನಿಮಾ ಮಾಡಲಿದ್ದು, ಆ ಚಿತ್ರಗಳ ಅನೌನ್ಸ್ಮೆಂಟ್ ಕೂಡಾ ಆಗುವ ನಿರೀಕ್ಷೆಗಳಿವೆ. ಹೀಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸುದೀಪ್ ಬರ್ತ್ಡೇಯಂದು ಅಭಿಮಾನಿಗಳಿಗೆ ಸಾಕಷ್ಟು ಸರ್ಪ್ರೈಸ್ಗಳು ಸಿಗಲಿವೆ.