ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 30 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಆಭೀವೃಧ್ದಿಗೆ ಮುಂದಿನ ದಿನಮಾನದಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಸಂಸದ ಗೋವಿಂದ ಕಾರಜೋಳ ಭರವಸೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಗಣೇಶ್ ದೇವಾಲಯದ ಬಳಿ ಶುಕ್ರವಾರ ನೂತನವಾಗಿ ಸಂಸದರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಹಿಂದುಳಿದ ವರ್ಗದವರನ್ನು,ಪರಿಶಿಷ್ಟ ಜಾತಿ/ಪಂಗಡದವರನ್ನು ಹೊಂದಿರುವ ಬಡತನರೇಖೆಯ ಮಟ್ಟಕ್ಕಿಂತ ಕೆಳಗಿರುವವರೇ ಈ ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ. ಈ ಕ್ಷೇತ್ರದಲ್ಲಿ ಜನರ ಜೀವನ ಮಟ್ಟ ಸುಧಾರಿಸಬೇಕಾಗಿದೆ, ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳಬೇಕಾಗಿದೆ, ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಎಲ್ಲರೂ ಪಕ್ಷಭೇದ ಮರೆತು ಕೆಲಸ ಮಾಡುವ ಅನಿವಾರ್ಯತೆಯಿದೆ ಎಂದಿದ್ದಾರೆ.
ಲೋಕಸಭಾ ಅಧಿವೇಶನ ಮುಗಿದ ಬಳಿಕ ಕಳೆದ 20 ದಿನಗಳಿಂದ ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಿ ಇಡೀ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸುವ, ಅಭಿವೃದ್ಧಿಯ ದೃಷ್ಟಿಯಿಂದ ಹಲವು ಸಭೆಗಳನ್ನು ನಡೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪವನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್‌ರವನ್ನು, ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್‌ರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಅನುದಾನ ಬಿಡಗಡೆ ಮಾಡುವಂತೆ ಮನವಿ ಮಾಡಿದ್ದು,ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡುವ ದೃಷ್ಟಿಯಿಂದ ಸಭೆ ನಡೆಸಿ ಅರಣ್ಯ ಇಲಾಖೆಯಿಂದ ಹಾಗೂ ಭೂ-ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿ ಮಟ್ಟದಲ್ಲಿ ಸಭೆ ಏರ್ಪಾಡು ಮಾಡಲು ಕ್ರಮಕೈಗೊಂಡಿದ್ದೇನೆ ಎಂದರು.
ಚಿತ್ರದುರ್ಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಕೇಂದ್ರ ಪ್ರವಾಸೋಧ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್‌ರನ್ನು ಭೇಟಿ ಮಾಡಿ ಚಿತ್ರದುರ್ಗದ ಕಲ್ಲಿನ ಕೋಟೆ, ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ,ಜೋಗಿಮಟ್ಟಿ ವಿಹಾರಧಾಮ, ಚಂದ್ರವಳ್ಳಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು 30 ಕೋಟಿ ಅನುದಾನ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ರವರನ್ನು ಭೇಟಿ ಮಾಡಿ 2025-26 ನೇ ಶೈಕ್ಷಣಿಕ ವರ್ಷದಿಂದ ಚಿತ್ರದುರ್ಗದ ಕೇಂದ್ರೀಯಾ ವಿದ್ಯಾಲಯವನ್ನು ಪ್ರಾರಂಭ, ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ,ಚಿತ್ರದುರ್ಗದಿಂದ-ಚಳ್ಳಕೆರೆ-ಪಾವಗಡ ಮುಖಾಂತರ ಆಂಧ್ರಪ್ರದೇಶದ ಪೆನುಕೊಂಡವರೆಗಿನ ೧೭೮ ೩.ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಸಂಸದರು ತಿಳಿಸಿದರು.
ಚಳ್ಳಕೆರೆ ನಗರ ಪರಿಮಿತಿಯಲ್ಲಿ 7 ಕಿ.ಮೀ ಉದ್ದದ ಹೆದ್ದಾರಿಯನ್ನು ನಾಲ್ಕು ಪಥದ ಹೆದ್ದಾರಿಯನ್ನಾಗಿ ಮಾಡಲು ಅನುದಾನ ಬಿಡುಗಡೆ.
ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಹಿರಿಯೂರು ಬಳಿ ನಿರ್ಮಾಣವಾಗುತ್ತಿರುವ ಪ್ರೈಓವರನ್ನು ನಿರ್ಮಾಣ ಮೂಡಿಗೆರೆಯಿಂದ-ಚಿಕ್ಕಮಗಳೂರು-ಕಡೂರು-ಹೊಸದುರ್ಗ-ಹೊಳಲ್ಕೆರೆಯವರೆಗೆ ಈಗಾಗಲೇ ಅಭಿವೃದ್ಧಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯನ್ನು ದಾವಣಗೆರೆ ತಾಲ್ಲೂಕು ಆನಗೋಡುವರೆಗೆ ವಿಸ್ತರಣೆ, ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಆನೆಸಿದ್ರಿ ಗ್ರಾಮದ ಬಳಿ ಕೆಳಸೇತುವೆ ನಿರ್ಮಾಣ ಮಾಡಲು, ಸಿರಾ ತಾಲ್ಲೂಕು ತಾವರಕೆರೆ ಬಳಿ ಹಾಲಿ ಇರುವ ಕೆಳಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು ಅದನ್ನು ಸರಿಪಡಿಸುವಂತೆ ಮನವಿ ಮಾಡಿದ್ದೇನೆ.
ಹಿರಿಯೂರು-ಚಳ್ಳಕೆರೆ ನಾಲ್ಕುಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಕಳವಿಬಾಗಿ, ಲಕ್ಷ್ಮೀಪುರ-ಸಿದ್ದಾಪುರ,ವೀರದಿಮ್ಮನಹಳ್ಳಿ, ಕಮ್ಮತಮರಿಕುಂಟೆ ಸೇರಿದಂತೆ ಹಲವು ಗ್ರಾಮಗಳ ಬಳಿ ಕೆಳಸೇತುವೆ/ ಮೇಲುಸೇತುವೆ. ಸರ್ವೀಸ್ ರಸ್ತೆ ನಿರ್ಮಾಣ
ಸೇರಿದಂತೆ ಹಲವು ಮಾರ್ಪಾಡುಗಳಿಗೆ ಶಿಫಾರಸ್ಸು ಮಾಡಲಾಗಿದೆ.ಪಾವಗಡ-ಮಡಕಶಿರಾ ಹೊಸ ಬ್ರಾಡ್‌ಗೇಜ್ ನಿರ್ಮಾಣಕ್ಕೆ ರೂ.265 ಕೋಟಿ. ಹೊಸದುರ್ಗ ರೋಡ್‌ನಲ್ಲಿ ವಿಶ್ವಮಾನವ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ರೈಲುಗಳ ನಿಲುಗಡೆ ಹಾಗೂ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಮತ್ತು ಅಮೃತಾಪುರ ರೈಲ್ವೆ ನಿಲ್ದಾಣದಲ್ಲಿ ಕೆಲವು ಪ್ಯಾಸೆಂಜರ್ ಟ್ರೈನ್‌ಗಳನ್ನು ನಿಲುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
ಮೊಳಕಾಲ್ಕೂರು ರೈಲ್ವೆ ನಿಲ್ದಾಣದಲ್ಲಿ ಹೊಸಪೇಟೆ-ಬೆಂಗಳೂರು,ಕಾರಟಗಿ-ಯಶವಂತಪುರ ರೈಲು ನಿಲುಗಡೆ ಸಮಯ ಬದಲಾವಣೆ ಚಳ್ಳಕೆರೆ-ಪಾವಗಡ ರಸ್ತೆಯಲ್ಲಿ ಚಳ್ಳಕೆರೆ ನಗರಪರಿಮಿತಿಯಲ್ಲಿ ರೈಲ್ವೆ ಗೇಟ್ ನಂ.೪೫ ಕ್ಕೆ ಮೇಲು ಸೇತುವೆ ನಿರ್ಮಾಣ ಮಾಡಲು ಮನವಿ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಪಂಗಡದವರಿರುವ ಚಳ್ಳಕೆರೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣ ಮಾಡಲು ೧೫ ಎಕರೆ ಸರ್ಕಾರಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಚಿತ್ರದುರ್ಗ ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲು ಸುಮಾರು 5 ಎಕರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಸುಮಾರು ೧೫ ಕೋಟಿ ಅನುದಾನವನ್ನು ಸೈನ್ಸ್ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶದಿಂದ ಕಾಯ್ದಿರಿಸಲಾಗಿದೆ, ಕೇಂದ್ರ ಸರ್ಕಾರದ ಪಾಲನ್ನೂ ಕೂಡ ಬಳಸಿಕೊಂಡು ಇನ್ನೂ ಉತ್ತಮವಾಗಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶವಿದೆ. ಚಿತ್ರದುರ್ಗ ನಗರದ ಸಮೀಪವೇ ಇರುವ ಓಬಣ್ಣನಹಳ್ಳಿ ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ಥರಾದ ಜನರ ಸಮಸ್ಯೆಗಳನ್ನು ಖುದ್ದಾಗಿ ಭೇಟಿ ನೀಡಿ ಆಲಿಸಿದ್ದೇನೆ. ಇಡೀ ಗ್ರಾಮವನ್ನು ವಸತಿ ಸಹಿತ ಪುನರ್‌ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಅಗತ್ಯ ಪ್ರಸ್ಥಾವನೆ ಸಿದ್ದಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ವಕ್ತಾರ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.