ದುಬೈ: ಟೆಸ್ಟ್ ಆಡುವ ದೇಶಗಳು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಅಂಕಪಟ್ಟಿಯ ಮೇಲೆ ಕಣ್ಣಿರಿಸಿವೆ. 2025ರ ಮಧ್ಯದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದ್ದು, ಫೈನಲ್ ಪ್ರವೇಶಿಸಲು ಹಲವು ತಂಡಗಳು ಪೈಪೋಟಿ ನಡೆಸುತ್ತಿವೆ.

ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ICC) ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಿದೆ. ಫೈನಲ್ ಪಂದ್ಯವು ಜೂನ್ 11 ಮತ್ತು ಜೂನ್ 15 ರ ನಡುವೆ ಲಂಡನ್ ನ ಲಾರ್ಡ್ಸ್ (Lords) ನಲ್ಲಿ ನಡೆಯಲಿದೆ ಎಂದು ಐಸಿಸಿ ಪ್ರಕಟಿಸಿದೆ. ಜೂನ್ 16ರಂದು ಹೆಚ್ಚುವರಿ ದಿನ ಘೋಷಿಸಲಾಗಿದೆ.
ಇದು ಮೂರನೇ ಆವೃತ್ತಿಯ ಡಬ್ಲ್ಯೂಟಿಸಿ ಆಗಿದ್ದು, ಕಳೆದೆರಡು ಆವೃತ್ತಿಯ ಫೈನಲ್ ಪಂದ್ಯಗಳು ಇಂಗ್ಲೆಂಡ್ ನಲ್ಲಿಯೇ ನಡೆದಿತ್ತು. ಈ ಬಾರಿಯ ಫೈನಲ್ ಪಂದ್ಯವೂ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆಯಲಿದೆ. ಸದ್ಯದ ಡಬ್ಲ್ಯೂಟಿಸಿ ಅಂಕಪಟ್ಟಿಯ ಪ್ರಕಾರ ಭಾರತವು ಅಗ್ರ ಕ್ರಮಾಂಕದಲ್ಲಿದೆ. ಎರಡನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ತಂಡವಿದೆ.

ಕ್ರಿಕೆಟ್ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್ ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯುತ್ತಿದೆ. ಮೊದಲ ಆವೃತ್ತಿಯ ಫೈನಲ್ (2021) ಸೌತ್ಹ್ಯಾಂಪ್ಟನ್ ನಲ್ಲಿ ಮತ್ತು ಎರಡನೇ ಆವೃತ್ತಿಯ ಫೈನಲ್ (2023) ಓವಲ್ ನಲ್ಲಿ ನಡೆದಿತ್ತು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದವು. ಎರಡು ಬಾರಿಯೂ ಭಾರತ ರನ್ನರ್ ಅಪ್ ಆಗಿತ್ತು.