T20 World Cup 2024: ಮಹಿಳಾ ಟಿ20 ವಿಶ್ವಕಪ್ 2024ರ ಟಿಕೆಟ್ ದರವನ್ನು ಐಸಿಸಿ ಅತ್ಯಂತ ಕಡಿಮೆ ಇರಿಸಿದೆ. ಗರಿಷ್ಠ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುವಂತೆ ಮಾಡುವ ಸಲುವಾಗಿ ಐಸಿಸಿ ಟಿಕೆಟ್ ದರವನ್ನು ಕೇವಲ 5 ದಿರ್ಹಮ್ಗಳಲ್ಲಿ ಇರಿಸಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 115 ರೂ. ಆಗಲಿದೆ.
ಇದೇ ಅಕ್ಟೋಬರ್ 3 ರಿಂದ ಆರಂಭವಾಗಲಿರುವ ಮಹಿಳೆಯರ ಟಿ20 ವಿಶ್ವಕಪ್ಗೆ ಯುಎಇ ಆತಿಥ್ಯವಹಿಸುತ್ತಿದೆ. ವಾಸ್ತವವಾಗಿ ಈ ಟೂರ್ನಿ ಈ ಮೊದಲು ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿ ಮೀಸಲಾತಿಯ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಈ ಚುಟುಕು ವಿಶ್ವಕಪ್ ಅನ್ನು ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ. ಇನ್ನು ಈ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ದುಬೈ ಮತ್ತು ಶಾರ್ಜಾ ಮೈದಾನದಲ್ಲಿ ನಡೆಯಲಿವೆ. ಈ ನಡುವೆ ಈ ಚುಟುಕು ವಿಶ್ವಸಮರದ ಟಿಕೆಟ್ಗಳ ಮಾರಾಟವನ್ನು ಐಸಿಸಿ ಪ್ರಾರಂಭಿಸಿದೆ.
115 ರೂಪಾಯಿಗೆ ಟಿಕೆಟ್
ಮಹಿಳಾ ಟಿ20 ವಿಶ್ವಕಪ್ 2024ರ ಟಿಕೆಟ್ ದರವನ್ನು ಐಸಿಸಿ ಅತ್ಯಂತ ಕಡಿಮೆ ಇರಿಸಿದೆ. ಗರಿಷ್ಠ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುವಂತೆ ಮಾಡುವ ಸಲುವಾಗಿ ಐಸಿಸಿ ಟಿಕೆಟ್ ದರವನ್ನು ಕೇವಲ 5 ದಿರ್ಹಮ್ಗಳಲ್ಲಿ ಇರಿಸಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 115 ರೂ. ಆಗಲಿದೆ. ಈ ಟಿಕೆಟ್ ಅನ್ನು ಐಸಿಸಿ ವೆಬ್ಸೈಟ್ನಿಂದ ಬುಕ್ ಮಾಡಬಹುದು. ಟಿಕೆಟ್ ದರಗಳನ್ನು ಬಿಡುಗಡೆ ಮಾಡಲು ಐಸಿಸಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾವನ್ನು ಆಯ್ಕೆ ಮಾಡಿದ್ದು, ಮಹಿಳಾ ಟಿ20 ವಿಶ್ವಕಪ್ 2024 ರ ಟಿಕೆಟ್ ದರಗಳನ್ನು ಲೇಸರ್ ಶೋ ಮೂಲಕ ಬಿಡುಗಡೆ ಮಾಡಲಾಗಿದೆ.
ಉಚಿತ ಪ್ರವೇಶ
ಟಿಕೆಟ್ ದರವನ್ನು ಕೇವಲ 115 ರೂಗಳಿಗೆ ಇರಿಸಿರುವುದರ ಜೊತೆಗೆ ಐಸಿಸಿ, ಈ ಪಂದ್ಯಾವಳಿ ನೋಡಲು ಬರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಉಚಿತ ಟಿಕೆಟ್ಗಳನ್ನು ನೀಡಲು ಮುಂದಾಗಿದೆ. ಅದರರ್ಥ 18 ವರ್ಷದೊಳಗಿನವರಿಗೆ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ನೀಡಲಾಗುವುದು. ಹೆಚ್ಚು ಹೆಚ್ಚು ಯುವ ಕ್ರಿಕೆಟ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಬರಬೇಕು ಎಂಬುದು ಐಸಿಸಿಯ ಉದ್ದೇಶವಾಗಿದೆ.
10 ತಂಡಗಳ ನಡುವೆ ಫೈಟ್
ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ತಲಾ 5ರ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎ ಗುಂಪಿನಲ್ಲಿ ಇರಿಸಲಾಗಿದ್ದು, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಬಿ ಗುಂಪಿನಲ್ಲಿವೆ. ಎರಡೂ ಗುಂಪಿನ ಅಗ್ರ-2 ತಂಡಗಳು ನೇರವಾಗಿ ಸೆಮಿಫೈನಲ್ ತಲುಪಲಿವೆ. ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ಶಾರ್ಜಾ ಮೈದಾನದಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 20 ರಂದು ದುಬೈ ಮೈದಾನದಲ್ಲಿ ನಡೆಯಲಿದೆ.