ಹೆಣ್ಣುಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ದಾವಣಗೆರೆಯಲ್ಲಿ ನಾರಿ ಶಕ್ತಿ ಕಾರ್ಯಕ್ರಮ ಜಾರಿಗೆ ತರಲಾಗಿದೆ. 48 ದಿನಗಳ ಕಾಲ ಕರಾಟೆ ತರಬೇತಿ ನಡೆಯುತ್ತಿದೆ.

ದಾವಣಗೆರೆ: ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅದರಲ್ಲೂ ಅತ್ಯಾಚಾರದಂತಹ ಹೇಯಕೃತ್ಯಗಳಿಗೆ ಹಲವರು ಬಲಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ‘ನಾರಿ ಶಕ್ತಿ’ ಎಂಬ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ಜಾರಿಗೆ ತಂದಿದೆ.
ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಲಾಗಿರುವ ‘ನಾರಿ ಶಕ್ತಿ’ ಕಾರ್ಯಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಎಸ್ಪಿ ಉಮಾಪ್ರಶಾಂತ್ ಅವರು ಹಲಗಿಯನ್ನು ಕೈಯಿಂದ ಮುರಿದು ಗುರುವಾರ ಚಾಲನೆ ನೀಡಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, “ನಾರಿ ಶಕ್ತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇವೆ. ಶಾಲಾ-ಕಾಲೇಜು, ಹಾಸ್ಟೆಲ್ನ ಮಕ್ಕಳಿಗೆ ಕರಾಟೆ ತರಬೇತಿ ಆರಂಭಿಸಿದ್ದೇವೆ. ಮಹಿಳೆ ತನ್ನ ಆತ್ಮರಕ್ಷಣೆ ಮಾಡಿಕೊಳ್ಳುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕರಾಟೆ, ಟೇಕ್ವಾಂಡೊ ತರಬೇತಿ ನೀಡಲಾಗುತ್ತಿದೆ” ಎಂದರು.
48 ದಿನ, 48 ತಾಸು ಕರಾಟೆ ತರಬೇತಿ: ಈ ಕಾರ್ಯಕ್ರಮದಡಿ ಹೆಣ್ಣು ಮಕ್ಕಳಿಗೆ 48 ದಿನಗಳ ಕಾಲ ಒಟ್ಟು 48 ತಾಸು ಕರಾಟೆ ತರಬೇತಿ ನೀಡಲಾಗುತ್ತದೆ. 6ನೇ ತರಗತಿಯಿಂದ ಹಿಡಿದು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳ ತನಕವೂ ತರಬೇತಿ ಕೊಡಲಾಗುತ್ತಿದೆ.
“ಬೇರೆಯವರಿಂದ ರಕ್ಷಣೆಗಿಂತ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುವ ಆತ್ಮವಿಶ್ವಾಸ, ಧೈರ್ಯ ಮಹಿಳೆಯರಿಗೆ ಇರಬೇಕು. ಅದಕ್ಕಾಗಿ ತರಬೇತಿ ನೀಡುತ್ತಿದ್ದೇವೆ” ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದರು.
ನಾರಿ ಶಕ್ತಿ ತರಬೇತಿ ಪಡೆಯಲು ನೂರಾರು ವಿದ್ಯಾರ್ಥಿನಿಯರು ವಿವಿಧ ಶಾಲಾ-ಕಾಲೇಜುಗಳಿಂದ ಆಗಮಿಸಿದ್ದರು.
ವಿದ್ಯಾರ್ಥಿಗಳು ಹೇಳಿದ್ದೇನು?: “ನಾನು ಎಂಟು ವರ್ಷಗಳಿಂದ ಕರಾಟೆ ತರಬೇತಿ ಪಡೆಯುತ್ತಿದ್ದೇನೆ. ಎರಡು ವರ್ಷದಿಂದ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸುತ್ತಿದ್ದೇನೆ. ನಾರಿ ಶಕ್ತಿ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೇನೆ. ಕರಾಟೆ ಮಕ್ಕಳು ಕಲಿತರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಕರಾಟೆ ತರಬೇತಿಯಿಂದ ಸಹಾಯ ಆಗ್ತಿದೆ. ಈ ಕಾರ್ಯಕ್ರಮ ಇಡೀ ಜಿಲ್ಲೆಗೆ ವಿಸ್ತರಿಸಬೇಕು” ಎಂದು ವಿದ್ಯಾರ್ಥಿನಿ ಮನಸ್ವಿನಿ ಪಂಡಿತ್ ಹೇಳಿದರು.
“ನಾರಿ ಶಕ್ತಿ ಕಾರ್ಯಕ್ರಮ ದಾವಣಗೆರೆಗೆ ಸೀಮಿತವಾಗದೇ ಇಡೀ ರಾಜ್ಯಕ್ಕೆ ವಿಸ್ತರಿಸಲಿ. ಪ್ರತಿ ಮಹಿಳೆ ತಮ್ಮ ರಕ್ಷಣೆಗಾಗಿ ಕರಾಟೆ, ಟೇಕ್ವಾಂಡೋ ಕಲಿಯಬೇಕು. ಚಿಕ್ಕವರಿಂದಲೇ ಕಲಿತರೆ ಒಳ್ಳೆಯದು. ಎಂಟು ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸುತ್ತಿದ್ದೇನೆ. ಇಂದು ನಡೆದ ನಾರಿ ಶಕ್ತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಮಾಡಿಕೊಳ್ಳುವುದು ಹೇಗೆ, ಕರಾಟೆ ಎಂದರೇನು ಎಂಬುದನ್ನು ತಿಳಿಸಿಕೊಟ್ಟಿದ್ದೇನೆ” ಎಂದು ತರಬೇತುದಾರರಾದ ಮನಿಶಾ ಕಬ್ಬೂರು ತಿಳಿಸಿದರು.