
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 17 : ಇಲ್ಲಿನ ತೋಟಗಾರಿಕಾ ಕಚೇರಿ ಸಮೀಪವಿರುವ ಬಿಟ್ಸ್ ಹೈಟೆಕ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಸೆ.20 ರಂದು ಬೆಳಿಗ್ಗೆ 11 ಕ್ಕೆ ತ.ರಾ.ಸು.ರಂಗಮಂದಿರದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಂಸ್ಥಾಪಕ ರವೀಂದ್ರ ಕೆ.ಬಿ. ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದ ವಿಶ್ರಾಂತ
ಕುಲಪತಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಸಮಾರಂಭ ಉದ್ಘಾಟಿಸುವರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕುಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ
ಡಾ.ನಟರಾಜ್, ಸರ್ಕಾರಿ ವಿಜ್ಞಾನ ಕಾಲೇಜು ಸ್ನಾತಕೋತ್ತರ ಗಣಿತ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗಟ್ಟಿ ಎನ್.ಬಿ. ಬಿಟ್ಸ್ ಹೈಟೆಕ್
ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಕವಿತ ಬಿ.ಎಂ. ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
2014 ರಲ್ಲಿ ನಮ್ಮ ಕಾಲೇಜು ಆರಂಭಗೊಂಡಿದ್ದು, ಕೊರೋನಾ ಸಂದರ್ಭದಲ್ಲಿ ಕೆಲವು ವರ್ಷಗಳ ಕಾಲ ಪದವಿ ಪ್ರದಾನ
ಸಮಾರಂಭವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಸಮಾರಂಭದಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ
ಮಾಡಲಾಗುವುದೆಂದರು.
ಶುಲ್ಕ ಕಟ್ಟಲು ಆಗದಂತ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆಲ್ಲದೆ ಕೆಲವರಿಗೆ ಲ್ಯಾಪ್‍ಟ್ಯಾಪ್‍ಗಳನ್ನು ಕೊಟ್ಟಿದ್ದೇವೆ. ಮೂಗ ಮತ್ತು
ಕಿವುಡ ವಿದ್ಯಾರ್ಥಿನಿಯೊಬ್ಬಳಿಗೆ ನಮ್ಮ ಕಾಲೇಜಿನಲ್ಲಿ ಶಿಕ್ಷಣ ಕೊಟ್ಟಿದ್ದೇವೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೆ ಹೆಚ್ಚು ನಮ್ಮ
ಕಾಲೇಜಿನಲ್ಲಿ ಓದುತ್ತಿದ್ದಾರೆ. ಇಲ್ಲಿಯವರೆಗೂ ಮೂರು ಗೋಲ್ಡ್ ಮೆಡಲ್ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ ಡೊನೇಷನ್ ಹಾವಳಿ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಬಿಟ್ಸ್
ಹೈಟೆಕ್ ಕಾಲೇಜು ವಿಭಿನ್ನವಾಗಿದೆ. ವಿಶ್ವವಿದ್ಯಾನಿಲಯಗಳು, ಸರ್ಕಾರಗಳೆ ವಿದ್ಯಾರ್ಥಿಗಳ ಗೋಳನ್ನು ಕೇಳದ ಇಂತಹ ಪರಿಸ್ಥಿತಿಯಲ್ಲಿ ಬಡ
ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಉದಾರತೆ ಮೆರೆಯುತ್ತಿರುವುದು ಸುಲಭದ ಮಾತಲ್ಲ ಎಂದು ಹೇಳಿದರು.
ಬಿಟ್ಸ್ ಹೈಟೆಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕವಿತ ಜಿ.ಎಂ.ಮಾತನಾಡಿ ಪ್ರತಿ ವರ್ಷವೂ ನಮ್ಮ ಕಾಲೇಜಿಗೆ ಒಂದು ಇಲ್ಲವೇ
ಎರಡು ರ್ಯಾಂಕ್‍ಗಳು ಬರುತ್ತಿವೆ. ಹಣಕ್ಕಿಂತ ಮುಖ್ಯವಾಗಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಎಂದರು.