ಚಿತ್ರದುರ್ಗ: ಸೆ.22 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಕಛೇರಿ ಚಿತ್ರದುರ್ಗ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಚಿತ್ರದುರ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗಟ್ಟ ಇವರುಗಳ ಸಂಯುಕ್ತಾಶ್ರಯದಲ್ಲಿ ‘ ವಿಶ್ವ ಅಲ್ಝೈಮರ್ಸ್ ದಿನಾಚರಣೆ_2024’ ಅಂಗವಾಗಿ ಗೊನೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ|| ನಾಗರಾಜ್ ಜಿ ಒ ಚಾಲನೆ ನೀಡಿದರು. ಕಾರ್ಯಕ್ರಮ ಕುರಿತು ಮಾತನಾಡಿ ಅವರು ಆಲ್ಝೈಮರ್ಸ್ ತಿಂಗಳ ಭಾಗವಾದ ವಿಶ್ವ ಆಲ್ಝೈಮರ್ಸ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಆಚರಿಸಲಾಗುತ್ತದೆ , ಇದು ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ತಪ್ಪು ಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಆಲ್ಝೈಮರ್-ಬಾಧಿತ ರೋಗಿಗಳ ಕುಟುಂಬಗಳನ್ನು ನಿಭಾಯಿಸಲು ಮತ್ತು ರೋಗದ ವಿರುದ್ಧ ಹೋರಾಡಲು ಈ ದಿನವನ್ನು ಆಚರಿಸಲಾಗುತ್ತದೆ. ಮಾನಸಿಕ ರೋಗಿಗಳಿಗೆ ಪ್ರೀತಿಯ ಆರೈಕೆ ಮುಖ್ಯವಾಗಿದ್ದು ಆರಂಭದಲ್ಲೇ ಪತ್ತೆಹಚ್ಚಿ ರೋಗಿಗೆ ಚಿಕಿತ್ಸೆ ನೀಡುವುದು ಮತ್ತು ನರಸಂಬಂಧಿ ರೋಗಲಕ್ಷಣಗಳು ಕಂಡುಬಂದಲ್ಲಿ ದಯವಿಟ್ಟು ಕೂಡಲೆ ನರರೋಗ ತಜ್ಞರನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಝೈಮರ್ಸ್ ರೋಗದ ಬಗ್ಗೆ ಉಪನ್ಯಾಸ ನೀಡಿದ ನರರೋಗ ತಜ್ಞರಾದ ಡಾ|| ಕಿರಣ್ ಗೌಡ ಆರ್ ‘ ಅಲ್ಝೈಮರ್ಸ್ ಜಾಗೃತಿ ಮಾಸಾಚರಣೆ_2024 ಈ ವರ್ಷದ ಘೋಷವಾಕ್ಯವಾದ ” ಡಿಮೆನ್ಶಿಯ ಮೇಲೆ ಕಾರ್ಯನಿರ್ವಹಿಸುವ ಸಮಯ, ಅಲ್ಝೈಮರ್ಸ್ ಮೇಲೆ ಕಾರ್ಯನಿರ್ವಹಿಸುವ ಸಮಯ” ಎಂಬುದಾಗಿದ್ದು ಅದರಂತೆ ನಾವು ಆಲ್ಝೈಮರ್ಸ್ ಮತ್ತು ಮೆದುಳಿನ ಜಾಗೃತಿ ತಿಂಗಳನ್ನು ಆಚರಿಸುತ್ತಿರವ ಈ ಸಂಧರ್ಭದಲ್ಲಿ ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆ ಹೊಂದಿರುವವರನ್ನು ಕಾಳಜಿ ವಹಿಸುವ ಆರೈಕೆ ಮಾಡುವವರ ನಿಜವಾದ ಸಮರ್ಪಣೆಯನ್ನು ಗೌರವಿಸೋಣ. ಎಂದು ಹೇಳಿದರು.
ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವ್ ಅಧ್ಯಕ್ಷತೆ ವಹಿಸಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ|| ನಳಿನಾಕ್ಷಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕ್ಲೀನಿಕ್ ಸೈಕಾಲಜಿಸ್ಟ್ ಶ್ರೀಧರ್, ಕಭಿ ಜಿಲ್ಲಾ ಸಂಯೋಜಕ ಶರತ್ ಪಿ ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ. ನಿರೂಪಣೆ ಮಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ನಿರಾಶ್ರಿತರ ಪರಿಹಾರ ಕೇಂದ್ರದ ಸದಸ್ಯರಿಗೆ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ಯೋಗ ಪ್ರಾಣಾಯಾಮ ತರಬೇತಿ ನೀಡಿ ಮನಸ್ಸಿನ ಸ್ಥಿರತೆಗೆ ಪ್ರತಿದಿನ ದೈಹಿಕ ಚಟುವಟಿಕೆ ಜೊತೆಗೆ ಯೋಗಾಭ್ಯಾಸ ಮಾಡುವಂತೆ ತಿಳಿಸಿದರು.