ಹೊಸ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ.

ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದೇ ವಿಶೇಷ.

ಕಾನ್ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 47 ರನ್ ಬಾರಿಸಿದರು. ಈ 47 ರನ್ ಗಳೊಂದಿಗೆ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 27 ಸಾವಿರ ರನ್ ಪೂರೈಸಿದ್ದಾರೆ.

ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ 600 ಕ್ಕಿಂತ ಕಡಿಮೆ ಇನಿಂಗ್ಸ್​ಗಳಲ್ಲಿ 27 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅತೀ ವೇಗವಾಗಿ 27000 ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ವರ್ಲ್ಡ್‌ ರೆಕಾರ್ಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 623 ಇನಿಂಗ್ಸ್​ಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 27 ಸಾವಿರ ರನ್ ಪೂರೈಸಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 47 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಕೇವಲ 594 ಇನಿಂಗ್ಸ್​ಗಳಲ್ಲಿ 27000 ರನ್ ಪೂರೈಸಿದ್ದಾರೆ. ಈ ಮೂಲಕ 600ಕ್ಕಿಂತ ಕಡಿಮೆ ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸಚಿನ್, ವಿರಾಟ್ ಅಲ್ಲದೆ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 27000+ ರನ್ ಕಲೆಹಾಕಿದ್ದಾರೆ. ಲಂಕಾ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ 648 ಇನಿಂಗ್ಸ್​ಗಳ ಮೂಲಕ 27 ಸಾವಿರ ರನ್ ಪೂರೈಸಿದ್ದರು.

ಹಾಗೆಯೇ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 27 ಸಾವಿರ ರನ್ ಕಲೆಹಾಕಿದ್ದಾರೆ. ಈ ಸಾಧನೆ ಮಾಡಲು ಪಾಂಟಿಂಗ್‌ ತೆಗೆದುಕೊಂಡಿದ್ದು 650 ಇನಿಂಗ್ಸ್​ಗಳನ್ನು.

ಇದೀಗ ಕೇವಲ 594 ಇನಿಂಗ್ಸ್​ಗಳ 27 ಸಾವಿರ ರನ್ ಪೂರೈಸಿ ವಿರಾಟ್ ಕೊಹ್ಲಿ 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

Source : https://tv9kannada.com/photo-gallery/cricket-photos/virat-kohli-becomes-fastest-player-to-reach-27000-international-runs-cricket-news-in-kannada-zp-911224-8.html

Leave a Reply

Your email address will not be published. Required fields are marked *