ಚಿತ್ರದುರ್ಗ: ಅ.02: ಜಗತ್ತಿನಲ್ಲಿ ಶಾಂತಿ, ಅಹಿಂಸೆಯ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದೇ ರಾಷ್ಟ್ರ ಪಿತ ಮಹಾತ್ಮ ಗಾಂಧಿ. ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಅಹಿಂಸೆಯನ್ನು ಪ್ರತಿಪಾದಿಸುತ್ತ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ ಮಹಾತ್ಮ ನಮ್ಮ ಪೂಜ್ಯ ಗಾಂಧಿ ಎಂದು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಚಂದ್ರಕಾಂತ್ ನಾಗಸಮುದ್ರ ಅಭಿಪ್ರಾಯ ಪಟ್ಟಿದ್ದಾರೆ.
ಅಕ್ಟೋಬರ್ 2ರ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆಯ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ಹೋರಾಟ ನಡೆಸಿದರೂ ಅವರ ಮೂಲತತ್ವವು ಅಹಿಂಸೆಯನ್ನು ಉತ್ತೇಜಿಸುವುದಾಗಿತ್ತು. ಗಾಂಧಿ ಅವರು ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರು ಕೂಡ ಆಗಿ ತನ್ನ ತತ್ವ ಸಿದ್ದಾಂತಗಳಿಂದಲೇ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಟದ ನೇತೃತ್ವ ವಹಿಸಿದ್ದ ಗಾಂಧೀಜಿಯವರ ಹೋರಾಟದ ಹಾದಿಯಲ್ಲಿ ಅವರ ಸಿದ್ಧಾಂತಗಳು ಮತ್ತು ಹೋರಾಟಗಳು 1947 ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ದೊಡ್ಡ ಮಟ್ಟದಲ್ಲಿ ತಿರುವು ನೀಡಿತು. ಹೀಗಾಗಿ ಮಹಾತ್ಮಾ ಗಾಂಧೀಜಿಯವರು ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ನಾರದಮುನಿ, ಡಾ. ಶಿವಕುಮಾರ್, ಡಾ. ಉಮೇಶ್ ರೆಡ್ಡಿ, ಸಿಬ್ಬಂದಿಗಳಾದ ಅಶೋಕ್, ಶ್ರೀಮತಿ ಫರ್ಜಾನ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.