Women’s T20 World Cup 2024: 2024ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಅಂತಿಮವಾಗಿ ಟೀಂ ಇಂಡಿಯಾ ತನ್ನ ಗೆಲುವಿನ ಖಾತೆ ತೆರೆದಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್ಗಳಿಂದ ಸೋಲಿಸಿದೆ.
2024ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಅಂತಿಮವಾಗಿ ಟೀಂ ಇಂಡಿಯಾ ತನ್ನ ಗೆಲುವಿನ ಖಾತೆ ತೆರೆದಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅಧಿಕ ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆ ಟೀಂ ಇಂಡಿಯಾ ಪಾತ್ರವಾಗಿದೆ. ಇದುವರೆಗೆ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ 8 ಪಂದ್ಯಗಳನ್ನು ಆಡಿರುವ ಭಾರತ 6 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಭಾರತದ ಬೌಲರ್ಗಳ ಸಾಂಘೀಕ ದಾಳಿಗೆ ತತ್ತರಿಸಿ ಕೇವಲ 105 ರನ್ ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ, ಈ ಅಲ್ಪ ಗುರಿ ಬೆನ್ನಟ್ಟಿದ್ದ ಭಾರತ ತಂಡಕ್ಕೆ ಮತ್ತೊಮ್ಮೆ ಉತ್ತಮ ಆಂಭ ಸಿಗಲಿಲ್ಲ. ಆದರೆ ನಾಯಕಿ ಹರ್ಮನ್ಪ್ರೀತ್ ಕೌರ್ ಅತ್ಯುತ್ತಮ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇದರೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ತಲುಪುವ ಭರವಸೆಯನ್ನು ಇನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಭಾರತಕ್ಕೆ ಮತ್ತೆ ಕಳಪೆ ಆರಂಭ
ಪಾಕ್ ನೀಡಿದ 105 ರನ್ಗಳ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲಿಲ್ಲ. ಮತ್ತೊಮ್ಮೆ ನಿರಾಸೆ ಮೂಡಿಸಿದ ಸ್ಮೃತಿ ಮಂಧಾನ ಕೇವಲ ಏಳು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಬಂದ ಜೆಮಿಮಾ, ಶಫಾಲಿ ಜೊತೆಗೂಡಿ ಎರಡನೇ ವಿಕೆಟ್ಗೆ 43 ರನ್ಗಳ ಜೊತೆಯಾಟ ಹಂಚಿಕೊಂಡರು. ಈ ವೇಳೆ ಶಫಾಲಿ 32 ರನ್ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರು. ಅವರ ಹಿಂದೆ ಜೆಮಿಮಾ ಕೂಡ 23 ರನ್ಗಳ ಇನ್ನಿಂಗ್ಸ್ ಆಡಿ ಬ್ಯಾಟ್ ಎತ್ತಿಟ್ಟರು.
ಆ ಬಳಿಕ ಇನ್ನಿಂಗ್ಸ್ ಜವಬ್ದಾರಿ ಹೊತ್ತುಕೊಂಡ ನಾಯಕಿ ಹರ್ಮನ್ಪ್ರೀತ್ ಸಿಂಗ್ ಪಾಕಿಸ್ತಾನದ ಬೌಲರ್ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. 29 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡುವ ಮೂಲಕ ಹರ್ಮನ್ಪ್ರೀತ್ ತಂಡವನ್ನುಯ ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಕೊನೆಯದಾಗಿ ದೀಪ್ತಿ ಶರ್ಮಾ ಮತ್ತು ಸಜೀವನ್ ಸಜ್ನಾ ಕ್ರಮವಾಗಿ ಅಜೇಯ ಏಳು ಮತ್ತು ನಾಲ್ಕು ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬಾಂಗ್ಲಾದೇಶ ಪರ ಫಾತಿಮಾ ಸನಾ ಎರಡು ಹಾಗೂ ಸಾದಿಯಾ ಮತ್ತು ಒಮೈಮಾ ತಲಾ ಒಂದು ವಿಕೆಟ್ ಪಡೆದರು.
ಪಾಕಿಸ್ತಾನಕ್ಕೂ ಕಳಪೆ ಆರಂಭ
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನಲ್ಲೇ ರೇಣುಕಾ ಸಿಂಗ್, ಗುಲ್ ಫಿರೋಜಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದರು. ನಂತರ ಎರಡನೇ ವಿಕೆಟ್ಗೆ 24 ರನ್ಗಳ ಜೊತೆಯಾಟ ಕಂಡುಬಂತು ಈ ವೇಳೆ ದಾಳಿಗಿಳಿದ ದೀಪ್ತಿ, ಸಿದ್ರಾ ಅಮೀನ್ ಅವರನ್ನು 8 ರನ್ಗಳಿಗೆ ಬಲಿ ಪಡೆದರು. ಆ ನಂತರವೂ ನಿಯಮಿತ ಅಂತರದಲ್ಲಿ ಪಾಕ್ ತಂಡದ ವಿಕೆಟ್ಗಳು ಪತನವಾಗುತ್ತಲೇ ಇದ್ದವು.
ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಾಜಿ ನಾಯಕಿ ನಿದಾ ದರ್ ಗರಿಷ್ಠ 28 ರನ್ಗಳ ಇನ್ನಿಂಗ್ಸ್ ಆಡಿದರು. ನಿದಾ ಅವರು ವಿಕೆಟ್ನಲ್ಲಿ ನಿಲ್ಲದೆ ಹೋಗಿದ್ದರೆ, ಪಾಕ್ ತಂಡ ಶತಕದ ಗಡಿಯನ್ನೂ ಸಹ ದಾಟುತ್ತಿರಲಿಲ್ಲ. ನಿದಾಗೆ ಸಾಥ್ ನೀಡಿದ ನಾಯಕಿ ಫಾತಿಮಾ 13 ರನ್ಗಳ ಕಾಣಿಕೆ ನೀಡಿದರೆ, ಕೊನೆಯಲ್ಲಿ ಸೈಯದಾ ಅರೂಬ್ ಶಾ 14 ರನ್ಗಳ ಇನ್ನಿಂಗ್ಸ್ ಆಡಿದರು.
ಮಿಂಚಿದ ಅರುಂಧತಿ, ಶ್ರೇಯಾಂಕ
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅರುಂಧತಿ ರೆಡ್ಡಿ 4 ಓವರ್ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರೆ, ಪಂದ್ಯದುದ್ದಕ್ಕೂ ರನ್ಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ ಖೋಟಾದ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇದರಲ್ಲಿ 1 ಮೇಡನ್ ಓವರ್ ಕೂಡ ಸೇರಿತ್ತು.
4ನೇ ಸ್ಥಾನದಲ್ಲಿ ಭಾರತ
ಭಾರತ ತಂಡ ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಹರ್ಮನ್ ಪಡೆ ಎರಡು ಅಂಕ ಗಳಿಸಿದೆಯಾದರೂ ನೆಟ್ ರನ್ ರೇಟ್ ಮಾತ್ರ -1.217 ಆಗಿದೆ. ಇದೀಗ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಅಕ್ಟೋಬರ್ 9 ರಂದು ಆಡಬೇಕಿದೆ.