ಭಾರಿ ಕುತೂಹಲ ಕೆರಳಿಸಿರುವ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಉಪಚುನಾವಣೆ ದಿನಾಂಕವನ್ನ ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಘೋಷಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದ 521 ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಬೆಂಗಳೂರು, ಅಕ್ಟೋಬರ್ 18: ರಾಜ್ಯ ರಾಜಕೀಯದಲ್ಲಿ ಹಗರಣಗಳ ಮಧ್ಯೆ ಇತ್ತೀಚೆಗೆ ಬೈಎಲೆಕ್ಷನ್ ಘೋಷಣೆ ಮಾಡಲಾಗಿತ್ತು. ಚುನಾವಣೆ ಘೋಷಣೆ ಆಗಿದ್ದೇ ತಡ ಮೂರು ಪಕ್ಷಗಳು ರಣತಂತ್ರ ಆರಂಭಿಸಿವೆ. ಇದರ ಮಧ್ಯೆ ಕರ್ನಾಟಕದ 531 ಗ್ರಾಮ ಪಂಚಾಯಿತಿಗಳಲ್ಲಿ (Gram panchayat) ತೆರವಾಗಿರುವ ಸ್ಥಾನಗಳಿಗೆ ರಾಜ್ಯ ಚುನಾವಣಾ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ನವೆಂಬರ್ 21 ರಂದು ಮತದಾನ ನಡೆಯಲಿದ್ದು, ನವೆಂಬರ್ 26 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕದ ಮೂರು ಕ್ಷೇತ್ರಗಳು ಸೇರಿ ವಿವಿಧ ರಾಜ್ಯಗಳ 47 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಭಾರಿ ಕುತೂಹಲ ಕೆರಳಿಸಿರುವ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಉಪಚುನಾವಣೆ ದಿನಾಂಕವನ್ನ ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಘೋಷಿಸಿದೆ.
ನ.13ರಂದು ಎಲೆಕ್ಷನ್: ನ.23ಕ್ಕೆ ಮತಎಣಿಕೆ
ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 18ರಿಂದ ಉಪಚುನಾವಣೆಗೆ ಅಧಿಸೂಚನೆಯು ಪ್ರಕಟವಾಗಲಿದೆ. ಇನ್ನು ಅಕ್ಟೋಬರ್ 25ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಅಕ್ಟೋಬರ್ 28ರಂದು 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಗೆ ಅವಕಾಶ ಇದೆ. ನ.23ರಂದು ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ.
ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿಕೆ ಶಿವಕುಮಾರ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಉಪ ಕದನದ ಕಹಳೆ ಮೊಳಗಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ್ದ ಅವರು, ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಆಗಲಿ. ಆಮೇಲೆ ನಮ್ಮ ನಿರ್ಧಾರ ಏನು ಅಂತ ಹೇಳುತ್ತೇವೆ. ಮುಂದೆ ಏನಾಗುತ್ತೆ ನೋಡೋಣ ಎಂದಿದ್ದಾರೆ. ಈಗಾಗಲೇ ಉಪಚುನಾವಣೆ ಕೆಲಸ ಆರಂಭಿಸಿದ್ದೇವೆ. ಮೂರು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಉಪಚುನಾವಣೆಯಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಭರವಸೆ ವ್ಯಕ್ತಪಡಿಸಿದ್ದರು. ವಿಜಯಪುರ ನಗರದಲ್ಲಿ ಮಾತನಾಡಿದ್ದ ಅವರು, ವರಿಷ್ಠರ ಜತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು.