Education News: 5 ಮತ್ತು 8 ತರಗತಿ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ನಡೆಯಲಿದೆ ವಾರ್ಷಿಕ ಪರೀಕ್ಷೆ, ಮಾ. 9ರಿಂದ ಪರೀಕ್ಷೆ ಆರಂಭ.

ಮಾರ್ಚ್ 9 2023 ರಿಂದ 17 ಮಾರ್ಚ್ 2023ರವರೆಗೆ ವಾರ್ಷಿಕ ಪರೀಕ್ಷೆ ಜರುಗಲಿದೆ. ಏಪ್ರಿಲ್ 08 ಮತ್ತು ಏಪ್ರಿಲ್ 10 ರಂದು ಫಲಿತಾಂಶ ಪ್ರಕಟಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು: ಈ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಸರಕಾರವು 5 ಮತ್ತು 8ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲು ಉದ್ದೇಶಿಸಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ನವೆಂಬರ್ 2022 ರಿಂದ ಮಾರ್ಚ್ 2023ರವರೆಗೆ ಪಠ್ಯಪುಸ್ತಕ ಆಧರಿಸಿ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ( K S E A B) ಉದ್ದೇಶಿಸಿದೆ. ಇದಕ್ಕೆ ಸರಕಾರ ಅನುಮತಿಯನ್ನೂ ನೀಡಿದೆ. ಹೀಗಾಗಿ, ಈ ಬಾರಿ ಐದನೇ ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್‌ ಪರೀಕ್ಷೆ ಬರೆಯಬೇಕಿದೆ.

ಶಿಕ್ಷಣ ಇಲಾಖೆ ಶಾಲಾ ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಪ್ರಗತಿಯ ಬಗೆಗಿನ ಅಧ್ಯಯನ ನಡೆಸಲು ಸೂಚನೆ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇದೀಗ ತನ್ನ ವರದಿ ಪ್ರಕಟಿಸಿದ್ದು, ಈ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಿಫಾರಸು ಮಾಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತರಿಂದ ಈ ಸಂಬಂಧ ಸುತ್ತೋಲೆ ಪ್ರಕಟವಾಗಿದ್ದು, ಮುಂಬರುವ ಮಾರ್ಚ್ 9ರಿಂದ ವಾರ್ಷಿಕ ಪರೀಕ್ಷೆ ನಡೆಯಲಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಅರ್ಧ ಶೈಕ್ಷಣಿಕ ವರ್ಷ ಪೂರ್ಣಗೊಂಡಿದೆ, ಕೆಲವು ಪರೀಕ್ಷೆಗಳು ನಡೆದು ಮೌಲ್ಯಂಕನವಾಗಿದ್ದು, SATS ನಲ್ಲಿ ಪ್ರಗತಿ ದಾಖಲಿಸಲಾಗಿರುತ್ತದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಪರೀಕ್ಷೆ ನಿರ್ವಹಿಸುವ ಬದಲಾಗಿ ಉಳಿದ ಅರ್ಧ ವರ್ಷಕ್ಕೆ ಸೀಮಿತಗೊಳಸಿ, ಸಾಂಕೇತಿಕವಾಗಿ ನವಂಬರ್-2022 ರಿಂದ ಮಾರ್ಚ್-2023ರ ಮೊದಲನೇ ವಾರದ ಒಳಗೆ ನಿರ್ವಹಿಸಿದ ಪಠ್ಯವಸ್ತುವನ್ನು ಆಧರಿಸಿ, ಸಂಕಲನಾತ್ಮಕ ಪರೀಕ್ಷೆನಡೆಸಲು ಉದ್ದೇಶಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲುಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಕಲಿಕಾ ಚೇತರಿಕೆ ಪಠ್ಯಕ್ರಮದ ಅಡಿಯಲ್ಲಿ ಪ್ರಶ್ನೆಗಳು ಸಿದ್ದಪಡಿಸಲು ನಿರ್ಧರಿಸಲಾಗಿದೆ. ಸದ್ಯ 1ನೇ ತರಗತಿಯಿಂದ 9ನೇ ತರಗತಿ ವರೆಗೆ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಇರಲಿಲ್ಲ. ಮಾರ್ಚ್ 9 2023 ರಿಂದ 17 ಮಾರ್ಚ್ 2023ರವರೆಗೆ ವಾರ್ಷಿಕ ಪರೀಕ್ಷೆ ಜರುಗಲಿದೆ. ಏಪ್ರಿಲ್ 08 ಮತ್ತು ಏಪ್ರಿಲ್ 10 ರಂದು ಫಲಿತಾಂಶ ಪ್ರಕಟಿಸಲು ಉದ್ದೇಶಿಸಲಾಗಿದೆ.

ಪರೀಕ್ಷಾ ಶುಲ್ಕ ಇಲ್ಲ

2022-23ನೇ ಸಾಲಿನ ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರವು ಆದೇಶಿಸಿದೆ. ಅದರಂತೆ ಸಂಬಂಧಿಸಿದ ವೆಚ್ಚದ ಕುರಿತಂತೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ನಿಯಮಾನುಸಾರ ಸರ್ಕಾರದಿಂದ ಅನುಮೋದನೆ ಪಡೆದು ಕ್ರಮವಹಿಸಲು K.S.E.A.Bಗೆ ತಿಳಿಸಿದೆ.

ಪರೀಕ್ಷಾ ಕೇಂದ್ರಗಳು

ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ. ಶಾಲಾವಾರು ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ.ಮೀ ವ್ಯಾಪ್ತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸಮೀಪದ ಕಿರಿಯ / ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳೂ ಸೇರಿದಂತೆ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮವಹಿಸಬೇಕು.

8ನೇ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 50 ಮಕ್ಕಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ |ಪ್ರೌಢಶಾಲೆಗಳಲ್ಲಿ ಸ್ಥಾಪಿಸುವುದು. ಹಿರಿಯ ಪ್ರಾಥಮಿಕ / ಪ್ರೌಢ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಕನಿಷ್ಠ 2. ಕಿ.ಮೀ ವ್ಯಾಪ್ತಿಯ ಸಮೀಪದ ಶಾಲೆಗಳಲ್ಲಿ ಪರೀಕ್ಷೆ ನಡೆಸಬೇಕು. ಸದರಿ ಪರೀಕ್ಷಾ ಕೇಂದ್ರಗಳ ಸ್ಥಾಪನೆ ಕುರಿತು ಸಿ.ಆರ್.ಪಿ ಗಳಿಂದ ವರದಿ ಪಡೆದು ಡಯಟ್ ಪ್ರಾಂಶುಪಾಲರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಪರಸ್ಪರ ಚರ್ಚಿಸಿ, ಪರೀಕ್ಷಾ ಕೇಂದ್ರ ಸ್ಥಾಪನೆಯ ವರದಿಯನ್ನು ಕ್ರೋಢೀಕರಿಸಿ KSEABಗೆ ವರದಿ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *