CP Yogeshwar : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿಗೆ ಗುಡ್ಬೈ ಹೇಳಿ, ಇಂದು (ಅ.23) ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಯುವ ಮೂಲಕ ಸಿಪಿವೈ ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಈ ವೇಳೆ ಸಚಿವರಾದ ರಾಮಲಿಂಗರೆಡ್ಡಿ, ಚಲುವರಾಯಸ್ವಾಮಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಕಾಣಿಕೊಂಡು ಅಚ್ಚರಿ ಮೂಡಿಸಿದ ಸಿಪಿವೈ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅದಕ್ಕೂ ಮುನ್ನವೇ ವಾಟ್ಸ್ಆಯಪ್ ಮೂಲಕ ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಂದ್ರ ಅವರಿಗೆ ವಾಟ್ಸ್ಆಯಪ್ ಮೂಲಕ ಸಿ.ಪಿ. ಯೋಗೇಶ್ವರ್ ಅವರು ರಾಜೀನಾಮೆ ಸಂದೇಶವನ್ನು ರವಾನಿಸಿದ್ದಾರೆ.
ಜೆಡಿಎಸ್ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಆಫರ್ ಅನ್ನು ಸಿಪಿವೈ ತಿರಸ್ಕರಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ನಾಯಕರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಸ್ವತಃ ಸಿಪಿವೈ ಆರೋಪ ಮಾಡಿದ್ದಾರೆ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಆದರೆ, ಬಿಜೆಪಿ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರು ಕೊನೆಗೂ ಕಾಂಗ್ರೆಸ್ ಬಾಗಿಲನ್ನು ಬಡಿದಿದ್ದಾರೆ. ಇಂದು ಸಂಜೆ ಅಥವಾ ನಾಳೆ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ.
ಅ.21ರಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಯೋಗೇಶ್ವರ್ ಅವರು ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.
Source : https://www.vijayavani.net/c-p-yogeshwar-officially-joining-congress-today