ಚಿತ್ರದುರ್ಗ:ಅ.26: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ಜೇನುಕೋಟೆ ಆಯುಷ್ಯ ಆರೋಗ್ಯ ಮಂದಿರ ವತಿಯಿಂದ ಜಯಂ ಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ, ವಿದ್ಯಾರ್ಥಿಗಳಿಗಾಗಿ ಶನಿವಾರ ಯೋಗ ಮತ್ತು ಪ್ರಾಣಾಯಾಮ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ ಮಾತನಾಡಿದ ಜಯನಕೋಟೆ ಆಯುಷ್ ಆರೋಗ್ಯ ಮಂದಿರದ ಯೋಗ ತರಬೇತಿದಾರ ರವಿ ಕೆ.ಅಂಬೇಕರ್ ಮಾತನಾಡಿ ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಶಿಕ್ಷಕರ ಜೊತೆಗೆ ಉತ್ತಮ ಆರೋಗ್ಯ ನೀಡುವುದು ಅವಶ್ಯಕ ಬಾಲ್ಯದಿಂದಲೇ ಯೋಗ ಮಾಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಯೋಗದ ಮೂಲಕ ಮಕ್ಕಳು ಲಘು ವ್ಯಾಯಾಮ ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು.
ಯೋಗವು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳುವಂತೆ ಮಾಡುತ್ತದೆ.ಸಾಮಾನ್ಯವಾಗಿ ಮಕ್ಕಳು ಏಳು ವರ್ಷದವರಾದಾಗ ಯೋಗವನ್ನು ಕಲಿಯಲು ಉತ್ತಮವಾದ ಸಮಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಮಕ್ಕಳಿಗೆ ಯೋಗ ಕುರಿತು ಹತ್ತು ಹಲವು ವಿಷಯಗಳನ್ನು ಪರಿಚಯಿಸುವುದಕ್ಕೆ ಮತ್ತು ಅವರು ಆ ವಿಷಯಗಳ ಕುರಿತಾಗಿ ಅರಿತುಕೊಂಡು ಆಯ್ಕೆಗಳನ್ನು ಮಾಡಲು ಸಾಧ್ಯವಾಗುವುದು ಮುಖ್ಯವಾಗಿದೆ.
ಮಕ್ಕಳಿಗೆ ಈ ಆಯ್ಕೆಗಳನ್ನು ನೀಡದೇ ಹೋದರೆ, ಅವರು ನೋಡಿರುವ ಕೆಲವೇ ಕೆಲವಾರು ಅಂಶಗಳು ಮಾತ್ರವೇ ಜಗತ್ತಿನಲ್ಲಿರುವುದು ಎಂದು ನಂಬಿಸುವ ಮನವೊಲಿಸುವಿಕೆಗೆ ಒಳಗಾಗುತ್ತಾರೆ. ಅವರ ಆಯ್ಕೆಗಳೇನಿದ್ದರೂ ತಂಪು ಪಾನೀಯಗಳು ಮತ್ತು ಪಿಜ್ಜಾಗಳ ನಡುವೆ ಮಾತ್ರ ಸೀಮಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಹೆಚ್ಚಾಗಿ ಶಿಕ್ಷಣದ ಜತೆಗೆ ಕ್ರೀಡೆ, ದೈಹಿಕ ವ್ಯಾಯಾಮ ಇತ್ಯಾದಿಗಳನ್ನು ಕಲಿಸಿ ಕೊಡಲಾಗುತ್ತಿದೆ. ಇದರಲ್ಲಿ ಯೋಗವು ಒಂದಾಗಿದೆ.
ಯೋಗಾಭ್ಯಾಸ ಮಾಡಿದರೆ ಆಗ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಗಳನ್ನು ಮಾಡಿದರೆ ಅವರ ನೆನೆಪಿನ ಶಕ್ತಿ, ಏಕಾಗ್ರತೆ ಮತ್ತು ಸಂಪೂರ್ಣ ಆರೋಗ್ಯವು ಸುಧಾರಣೆ ಆಗುವುದು. ಇಂತಹ ಯೋಗಗಳನ್ನು ನಿತ್ಯವೂ ಅಭ್ಯಾಸ ಮಾಡಬೇಕು. ಎಂದು ಮಕ್ಕಳಿಗೆ ತಿಳಿಸಿದರು.
ತರಬೇತಿಯಲ್ಲಿ ಶಾಲೆಯ ನೂರಾರು ಮಕ್ಕಳ ಜೊತೆಗೆ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಮುಮ್ತಾಜ್ ಬೇಗಂ ದೈಹಿಕ ಶಿಕ್ಷಕ ನಾಗೇಶ್ ಜೈನ್ ಕೋಟೆ ಆಯುಷ್ ಆರೋಗ್ಯ ಮಂದಿರದ ಆಡಳಿತ ವೈದ್ಯಾಧಿಕಾರಿ ಡಾ. ಪಿ.ವಿಜಯಲಕ್ಷ್ಮಿ ಆಸ್ಪತ್ರೆ ಸಿಬ್ಬಂದಿ ಶಾರದಮ್ಮ ಭಾಗವಹಿಸಿದ್ದರು