ಅಮರಾವತಿ: ಆಂಧ್ರ ಪ್ರದೇಶ ಸರ್ಕಾರವು ನವೆಂಬರ್ 1ರಂದು ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆಗೆ ಚಾಲನೆ ನೀಡಲಿದೆ. ಅರ್ಹ ಫಲಾನುಭವಿಗಳಿಗೆ ‘ದೀಪಂ-2’ ಯೋಜನೆಯಡಿ ವಾರ್ಷಿಕವಾಗಿ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ವಿತರಿಸಲಾಗುವುದು. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ನವೆಂಬರ್ 1ರಂದು ಶ್ರೀಕಾಕುಳಂದಲ್ಲಿ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಲಿದ್ದಾರೆ. ಈಗಾಗಲೇ ಬುಕ್ ಮಾಡಿದ ಗ್ರಾಹಕರಿಗೆ ನಾಳೆಯಿಂದಲೇ ಸಿಲಿಂಡರ್ ಸರಬರಾಜು ಮಾಡಲಾಗುವುದು.
ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ ಆರು ಭರವಸೆಗಳಲ್ಲಿ ಉಚಿತ ಎಲ್‌ಪಿಜಿ ಯೋಜನೆ ಒಂದಾಗಿದೆ. ಇದರ ಭಾಗವಾಗಿ ಪೆಟ್ರೋಲಿಯಂ ಕಂಪನಿಗಳಿಗೆ ಮೊದಲ ಸಿಲಿಂಡರ್ ವೆಚ್ಚದ ₹894 ಕೋಟಿ ಚೆಕ್ ಅನ್ನು ಮುಖ್ಯಮಂತ್ರಿ ನಾಯ್ಡು ಹಸ್ತಾಂತರಿಸಿದ್ದಾರೆ. ಉಚಿತ ಎಲ್‌ಪಿಜಿ ಯೋಜನೆಯಡಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು ₹2,684 ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಉಚಿತ ಅಡುಗೆ ಅನಿಲ ಸಿಲಿಂಡರ್ ಪೂರೈಸಲಾಗುವುದು.