ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶ್ರೀಮುರಳಿ ಅಭಿನಯದ ‘ಬಘೀರ’ ಸದ್ಯದಲ್ಲೇ ಸ್ಟ್ರೀಮಿಂಗ್ ಆಗಲಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಚಿತ್ರ 5ರಿಂದ 6 ಕೋಟಿ ರೂ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ ಸಂಸ್ಥೆಯ ಆಪ್ತರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬಘೀರ, ಒಂದೇ ತಿಂಗಳಿಗೆ ಒಟಿಟಿಗೆ ಬರಲು ಸಜ್ಜಾಗುತ್ತಿದೆ.
ನೆಟ್‍ಫ್ಲಿಕ್ಸ್‌ನಲ್ಲಿ ಬಘೀರ ರಿಲೀಸ್ ಆಗಲಿದೆ. ಮೊದಲು ಕನ್ನಡ ಸಿನಿಮಾಗಳನ್ನು ನೆಟ್‍ಫ್ಲಿಕ್ಸ್ ಖರೀದಿಸುವುದಿಲ್ಲ ಎಂಬ ಆರೋಪಗಳಿದ್ದವು. ಇದೇ ಕಾರಣಕ್ಕೆ ಕೆಲವು ತಿಂಗಳಗಳ ಹಿಂದೆ ನೆಟ್‍ಫ್ಲಿಕ್ಸ್ ವಿರುದ್ಧ ಕೆಲ ಕನ್ನಡ ನಿರ್ಮಾಪಕರು ತಿರುಗಿಬಿದ್ದಿದ್ದರು. ಬಘೀರ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಹೊಂಬಾಳೆ ಸಂಸ್ಥೆ ದೊಡ್ಡ ಮೊತ್ತಕ್ಕೆ ಚಿತ್ರವನ್ನು ಮಾರಾಟ ಮಾಡಿದೆಯಂತೆ. ಡಿಸೆಂಬರ್ ಮೊದಲ ವಾರದ ವೇಳೆಗೆ ಚಿತ್ರ ಒಟಿಟಿ ಪ್ರವೇಶಿಸಲಿದೆ.
ಶ್ರೀಮುರಳಿ ಖಡಕ್ ಪೊಲೀಸ್ ಆಫೀಸರ್ ಜೊತೆಗೆ ಬಘೀರನಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ರುಕ್ಮಿಣಿ ವಸಂತ್ ವೈದ್ಯೆಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಪ್ರಕಾಶ್ ರಾಜ್, ರಂಗಾಯಣ ರಘು, ಸುಧಾರಾಣಿ, ಅಚ್ಯುತ್ ಕುಮಾರ್, ಗರುಡ ರಾಮ್ ಸಿನಿಮಾದ ಭಾಗವಾಗಿದ್ದಾರೆ. ಪ್ರಶಾಂತ್ ನೀಲ್ ಚಿತ್ರದ ಕಥೆ ಬರೆದಿದ್ದು, ಡಾ.ಸೂರಿ ನಿರ್ದೇಶನ ಮಾಡಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.