ಚಿತ್ರದುರ್ಗ: ದಿನಾಂಕ 5.11.2024ರಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವಾಲಯ ಹಾಗೂ ಉಪದೇಶಕರು ಶಾಲಾ ಶಿಕ್ಷಣ ಇಲಾಖೆಯ ಚಿತ್ರದುರ್ಗ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಯುವ ಸಂಸತ್ತು ಸ್ಪರ್ಧೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮವನ್ನು ಮಾನ್ಯ ಉಪ ನಿರ್ದೇಶಕರು ಆಡಳಿತ ಮಂಜುನಾಥ್ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ಇವುಗಳ ಮಹತ್ವ ಮತ್ತು ಕಾರ್ಯ ಚಟುವಟಿಕೆಗಳು ಅರಿವನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗಭೂಷಣ್ ಅವರು ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳಲ್ಲಿರುವ ತಾರ್ಕಿಕ ಮನೋಭಾವನೆ, ಯೋಚನಾ ಲಹರಿ, ಅಭಿವ್ಯಕ್ತಿ ಈ ಎಲ್ಲಾ ವಿಚಾರಗಳನ್ನು ಹೊರಹೊಮ್ಮಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅತಿ ಮುಖ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಹೊಸದುರ್ಗ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಭಾವನ ಸಭಾಪತಿಯಾಗಿ ಕಲಾಪವನ್ನು ನಡೆಸಿಕೊಟ್ಟರು. ವಿರೋಧ ಪಕ್ಷದ ನಾಯಕಿಯಾಗಿ ಕೆಪಿಎಸ್ ಶಾಲೆ ಪರಶುರಾಂಪುರ ವಿದ್ಯಾರ್ಥಿನಿ ಹರಿಪ್ರಿಯಾ ಸರ್ಕಾರದ ವೈಫಲ್ಯಗಳನ್ನು ಕುರಿತು ಹಾಗೂ ಸಮಾಜದ ಸಮಸ್ಯೆಗಳನ್ನು ಕುರಿತು ಪ್ರಶ್ನಿಸಿದರು. ಕೆಪಿಎಸ್ ಶಾಲೆ ನಂದಿತಾ ಎಸ್ ವಿ ಮುಖ್ಯಮಂತ್ರಿಯಾಗಿ ವಿರೋಧ ಪಕ್ಷದ ಎಲ್ಲಾ ಸದಸ್ಯರ ಪ್ರಶ್ನೆಗೆ ಸಮಗ್ರವಾಗಿ ಉತ್ತರ ಕೊಡುತ್ತ ಸರ್ಕಾರವನ್ನು ಸಮರ್ಥಿಸಿಕೊಂಡರು. ಉಳಿದಂತೆ ವಿರೋಧ ಪಕ್ಷದ ಸದಸ್ಯರು ಕೇಳಿದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಮತ್ತು ರಾಜ್ಯದಲ್ಲಿ ರಕ್ಷಣೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ, ಆಡಳಿತ ಪಕ್ಷದ ಸಚಿವರು ಉತ್ತರವನ್ನು ನೀಡಿದರು.
ರಾಜ್ಯದಲ್ಲಿರುವ ಆರೋಗ್ಯ ಶಿಕ್ಷಣ ಸಾರಿಗೆ ಮತ್ತು ಕೃಷಿ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕುರಿತು ಚರ್ಚೆಗೆ ಇಂದು ನಡೆದ ಜಿಲ್ಲಾ ಮಟ್ಟದ ಯುವಕ ಸಂಸತ್ತು ಸ್ಪರ್ಧೆ ಸಾಕ್ಷಿಯಾಯಿತು.
ಅಂತಿಮವಾಗಿ ನಂದಿತಾ ಎಸ್ ವಿ ಪ್ರಥಮ ಸ್ಥಾನ, ಹರಿಪ್ರಿಯ ದ್ವಿತೀಯ ಸ್ಥಾನ, ಎಂ ಪಲ್ಲವಿ ಎಂ, ಎಂ, ಸರ್ಕಾರಿ ಪ್ರೌಢ ಶಾಲೆ ಹೊಳಲ್ಕೆರೆ ತೃತೀಯ ಸ್ಥಾನ ಪಡೆದರು.
ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಲಾಪವನ್ನು ಉತ್ತಮವಾಗಿ ನಡೆಸಿಕೊಟ್ಟರು.
ಪ್ರಶಾಂತ್ ಕೆ ಜಿ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರು ಸ್ವಾಗತಿಸಿದರು. ಆಂಗ್ಲ ಭಾಷೆ ಪರಿವೀಕ್ಷಕರಾದ ಚಂದ್ರಣ್ಣ ಹಾಜರಿದ್ದರು.
ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು, ಆರು ತಾಲೂಕುಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು.