ದಾವಣಗೆರೆ: 40 ಲಕ್ಷ ಇನ್ಶೂರೆನ್ಸ್‌ ಹಣ ಪಡೆಯಲು ಸಂಬಂಧಿಯ ಹತ್ಯೆ, ನಾಲ್ವರು ಆರೋಪಿಗಳ ಬಂಧನ.

  • 40 ಲಕ್ಷ ಇನ್ಶೂರೆನ್ಸ್‌ ಹಣ ಪಡೆಯಲು ಹತ್ಯೆ
  • ಕೊಲೆ ಕೃತ್ಯ ನಡೆದ 24 ಗಂಟೆಯೊಳಗೆ ನಾಲ್ವರು ಆರೋಪಿಗಳ ಬಂಧನ
  • ಇಮಾಮ್‌ ನಗರದ ದುಗ್ಗೇಶ್‌ (32) ಕೊಲೆಯಾದ ದುರ್ದೈವಿ

ದಾವಣಗೆರೆ : ತಮ್ಮ ಮಾಡಿದ ಸಾಲಕ್ಕಾಗಿ ಅಣ್ಣನನ್ನು ಕೊಲೆ ಮಾಡಿ ಶವವನ್ನು ಆತನ ಅಜ್ಜಿ ಮನೆ ಮುಂದೆ ಎಸೆದು ಹೋದ ಪ್ರಕರಣ ದಾವಣಗೆರೆಯ ಇಮಾಮ್‌ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆ ನಡೆದ 24 ಗಂಟೆಯ ಒಳಗಾಗಿ ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಮಾಮ್‌ ನಗರದ ದುಗ್ಗೇಶ್‌ (32) ಕೊಲೆಯಾದ ದುರ್ದೈವಿ. ಮೃತನ ಸಂಬಂಧಿ, ಬಂಬೂಬಜಾರ್‌ನ ಗಣೇಶ (24), ಹಳೇ ಚಿಕ್ಕನಹಳ್ಳಿಯ ಅನಿಲ (18), ಹಳೆ ಚಿಕ್ಕನಹಳ್ಳಿಯ ನಿವಾಸಿ ಶಿವಕುಮಾರ್‌ (25), ಭಾರತ್‌ ಕಾಲೋನಿಯ ನಿವಾಸಿ ಮಾರುತಿ (24) ಬಂಧಿತ ಆರೋಪಿಗಳು.

ದುಗ್ಗೇಶನ ತಂದೆ-ತಾಯಿ ಮೃತಪಟ್ಟ ಕಾರಣ, ಆತ ಇಮಾಮ್‌ ನಗರದಲ್ಲಿ ಅಜ್ಜಿ ಜತೆ ವಾಸವಿದ್ದ. ದುಗ್ಗೇಶ್‌ಗೆ ಗೋಪಿ ಎಂಬ ಸಹೋದರನಿದ್ದು, ಸಂಬಂಧಿ ಗಣೇಶ್‌ನನ್ನು ಮುಂದಿಟ್ಟುಕೊಂಡ ಗೋಪಿ, ಹಲವರ ಬಳಿ ಲಕ್ಷಾಂತರ ರೂ. ಕೈ ಸಾಲ ಮಾಡಿದ್ದ. ಆದರೆ, ಸಾಲ ವಾಪಸ್‌ ನೀಡದೆ, ಯಾರ ಕೈಗೂ ಸಿಗದೆ ಓಡಾಡುತ್ತಿದ್ದ. ಇತ್ತ ಮನೆಗೂ ಬಂದಿರಲಿಲ್ಲ. ಈ ನಡುವೆ ದುಗ್ಗೇಶನನ್ನು ಭೇಟಿಯಾಗುತ್ತಿದ್ದ ಗಣೇಶ, ಗೋಪಿಯ ಮೊಬೈಲ್‌ ನಂಬರ್‌ ಕೊಡುವಂತೆ ಮತ್ತು ಹಣ ಹಿಂದಿರುಗಿಸುವಂತೆ ಪೀಡಿಸುತ್ತಿದ್ದ.


ಕೊಂದವರಿಂದ ಹೈ ಡ್ರಾಮಾ!

ಈ ನಡುವೆ ಸೋಮವಾರ ಮಧ್ಯಾಹ್ನ ಮಾತನಾಡುವ ನೆಪದಲ್ಲಿ ದುಗ್ಗೇಶನನ್ನು ನಗರದ ಹೊರ ವಲಯಕ್ಕೆ ಕರೆದೊಯ್ದ ಗಣೇಶ್‌ ಹಾಗೂ ಇತರೆ ಆರೋಪಿಗಳು, ದುಗ್ಗೇಶ್‌ ಮೇಲೆ ಹಲ್ಲೆ ನಡೆಸಿ, ಟವೆಲ್‌ನಿಂದ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ದುಗ್ಗೇಶನ ಅಜ್ಜಿ ಮನೆ ಮುಂದೆ ಎಸೆದು ಹೋಗಿದ್ದರು. ಇದಕ್ಕೂ ಮುನ್ನ ಶವವನ್ನು ಬಾಪೂಜಿ ಆಸ್ಪತ್ರೆಗೆ ಕೊಂಡೊಯ್ದ ಆರೋಪಿಗಳು, ಬೀರಲಿಂಗೇಶ್ವರ ದೇವಸ್ಥಾನದ ಬಳಿ ವಾಕ್‌ ಮಾಡುವಾಗ ದುಗ್ಗೇಶ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಚಿಕಿತ್ಸೆಗೆ ಕರೆ ತಂದಿದ್ದೇವೆ ಎಂದಿದ್ದಾರೆ.

ಪರೀಕ್ಷೆ ಮಾಡಿದ ಬಾಪೂಜಿ ವೈದ್ಯರು, ದುಗ್ಗೇಶ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಶವವನ್ನು ಅಜ್ಜಿ ಮನೆ ಮುಂದೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.


ಇನ್ಶೂರೆನ್ಸ್‌ ಬಾಂಡ್‌ ಮಾಡಿಸಿದ್ದ!

ಗೋಪಿಯಿಂದ ಹೇಗೂ ಹಣ ಬರುವುದಿಲ್ಲ. ದುಗ್ಗೇಶ್‌ ಹೆಸರಿನಲ್ಲಿ ವಿಮೆ ಮಾಡಿಸಿ ಆತನನ್ನು ಕೊಲೆ ಮಾಡಿದರೆ, ವಿಮಾ ಕಂಪನಿಯಿಂದ ಹಣ ಪಡೆಯಬಹುದು ಎಂದು ಗಣೇಶ ಒಳಗೊಳಗೇ ಯೋಜನೆ ರೂಪಿಸಿದ್ದ. ಅದರಂತೆ, ದುಗ್ಗೇಶ್‌ ಹೆಸರಲ್ಲಿ ದಾವಣಗೆರೆಯ ಆಕ್ಸಿಸ್‌ ಬ್ಯಾಂಕ್‌ನಲ್ಲಿ40 ಲಕ್ಷ ರೂ. ಮೌಲ್ಯದ ಇನ್ಶೂರೆನ್ಸ್‌ ಬಾಂಡ್‌ ಮಾಡಿಸಿದ್ದ. ಬಳಿಕ ಅನಿಲ, ಶಿವಕುಮಾರ್‌, ಮಾರುತಿ ಜತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿದ್ದ.

ಹತ್ಯೆಗೀಡಾದ ದುಗ್ಗೇಶ್‌ ಸಂಬಂಧಿ ಯಲ್ಲಪ್ಪ ಎಂಬುವರು ಆಜಾದ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೂಡಲೆ ಕಾರ್ಯಪ್ರವೃತ್ತರಾದ ನಗರ ಡಿವೈಎಸ್‌ಪಿ ಮಲ್ಲೇಶ್‌ ದೊಡ್ಮನಿ ನೇತೃತ್ವದ ಆಜಾದ್‌ ನಗರ ಠಾಣೆ ಪೊಲೀಸರು, ಆರೋಪಿಗಳು ನಡೆಸಿದ ಹೈಡ್ರಾಮಾ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದು, ಮೊಬೈಲ್‌ ನೆಟ್‌ವರ್ಕ್ ಆಧರಿಸಿ ಆರೋಪಿಗಳನ್ನು ಬಧಿಸಿ, ಒಂದು ಪಲ್ಸರ್‌ ಬೈಕ್‌ ವಶಕ್ಕೆ ಪಡೆದಿದ್ದಾರೆ.

Source : https://vijaykarnataka.com/news/bagalkot/bagalakote-crime-news-murder-of-a-relative-for-insurance-money/articleshow/115008925.cms

Leave a Reply

Your email address will not be published. Required fields are marked *