ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿ ಹರಿಣಗಳ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರೆ, ಬೌಲರ್ಗಳು ಕೂಡ ತಾವೇನೂ ಕಮ್ಮಿ ಇಲ್ಲ ಎಂದು ಅತಿಥೇಯ ತಂಡವನ್ನ ಕೇವಲ 148 ರನ್ಗಳಿಗೆ ಕಟ್ಟಿ ಹಾಕುವ ಮೂಲಕ ಭಾರತಕ್ಕೆ 135 ರನ್ಗಳ ಜಯ ತಂದುಕೊಟ್ಟರು.

ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಅವರದ್ದೇ ನೆಲದಲ್ಲಿ ಭಾರತ 4 ಪಂದ್ಯಗಳ ಟಿ20 ಸರಣಿಯನ್ನ 3-1ರಲ್ಲಿ ಗೆದ್ದು ಬೀಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 135 ರನ್ಗಳಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿ ಹರಿಣಗಳ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರೆ, ಬೌಲರ್ಗಳು ಕೂಡ ತಾವೇನೂ ಕಮ್ಮಿ ಇಲ್ಲ ಎಂದು ಅತಿಥೇಯ ತಂಡವನ್ನ ಕೇವಲ 148 ರನ್ಗಳಿಗೆ ಕಟ್ಟಿ ಹಾಕುವ ಮೂಲಕ ಭಾರತಕ್ಕೆ 135 ರನ್ಗಳ ಜಯ ತಂದುಕೊಟ್ಟರು.
ಆರಂಭಿಕ ಆಘಾತ
ಭಾರತ ತಂಡ ನೀಡಿದ್ದ 284 ರನ್ಗಳ ವಿಶ್ವದಾಖಲೆಯ ಮೊತ್ತವನ್ನ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಮೊತ್ತವನ್ನ ಬೆನ್ನಟ್ಟಲಾಗದೇ 18.2 ಓವರ್ಗಳಲ್ಲಿ 148ಕ್ಕೆ ಆಲೌಟ್ ಆಯಿತು. ಬೆಟ್ಟದಂತ ಗುರಿ ಬೆನ್ನಟ್ಟಿ ಹರಿಣಗಳಿಗೆ ಅರ್ಶದೀಪ್ ಮೊದಲ ಓವರ್ನಲ್ಲೇ ಆಘಾತ ನೀಡಿದರು. ಮೊದಲ ಓವರ್ನಲ್ಲಿ ರೀಜಾ ಹೆನ್ರಿಕ್ಸ್ (1) ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2ನೇ ಓವರ್ನಲ್ಲಿ ರ್ಯಾನ್ ರಿಕೆಲ್ಟನ್ (0) ವಿಕೆಟ್ ಪಡೆದು ಮತ್ತೊಂದು ಆಘಾತ ನೀಡಿದರು. ಆರಂಭಿಕರನ್ನ ಕಳೆದುಕೊಂಡಿದ್ದ ಅತಿಥೇಯ ತಂಡ ಚೇತರಿಸಿಕೊಳ್ಳಲು ಅರ್ಶದೀಪ್ ಅವಕಾಶವನ್ನೇ ನೀಡಲಿಲ್ಲ. ತಮ್ಮ 2ನೇ ಓವರ್ನಲ್ಲಿ ನಾಯಕ ಮಾರ್ಕ್ರಮ್ (8) ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ (0)ರನ್ನ ಸತತ 2 ಎಸೆತಗಳಲ್ಲಿ ಪೆವಿಲಿಯನ್ಗಟ್ಟಿದರು.
ಸೋಲಿನ ಅಂತರ ತಗ್ಗಿಸಿದ ಸ್ಟಬ್ಸ್-ಮಿಲ್ಲರ್
ದಕ್ಷಿಣ ಅಫ್ರಿಕಾ 4 ಓವರ್ನಲ್ಲಿ ಕೇವಲ 10 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಾಣುವ ಸ್ಥಿತಿ ತಲುಪಿತ್ತು. ಆದರೆ 5ನೇ ವಿಕೆಟ್ಗೆ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಡೇವಿಡ್ ಮಿಲ್ಲರ್ 86 ರನ್ಗಳ ಜೊತೆಯಾಟ ನೀಡಿ ಸೋಲಿನ ಅಂತರವನ್ನ ತಗ್ಗಿಸಿದರಲ್ಲದೆ ತಂಡದ ಮೊತ್ತ 100ರ ಗಡಿ ದಾಟಲು ತಂಡಕ್ಕೆ ಕೊಡುಗೆ ನೀಡಿದರು. 27 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದ ಡೇವಿಡ್ ಮಿಲ್ಲರ್ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿ ಔಟಾದರು, ನಂತರದ ಎಸೆತದಲ್ಲಿ 29 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 43ರನ್ಗಳಿಸಿದ್ದ ಸ್ಟಬ್ಸ್ರನ್ನ ರವಿ ಬಿಷ್ಣೋಯ್ ಎಲ್ಬಿ ಬಲೆಗೆ ಬೀಳಿಸಿದರು.
ಇವರಿಬ್ಬರ ನಂತರ ಯಾವುದೇ ಜೊತೆಯಾಟ ಬರಲಿಲ್ಲ. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಾರ್ಕೊ ಜಾನ್ಸನ್ ಇಂದೂ ಕೂಡ ಕೆಲವೊಂದು ಅದ್ಭುತ ಶಾಟ್ ಮಾಡಿದರು. ಅವರು 12 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ಗಳ ಸಹಿತ ಅಜೇಯ 29 ರನ್ಗಳಿಸಿ ಸೋಲಿನ ಅಂತರವನ್ನ ತಗ್ಗಿಸಿದರು. ಉಳಿದಂತೆ ಗೆರಾಲ್ಡ್ ಕೊಯೆಟ್ಜಿ 12, ಕೇಶವ್ ಮಹಾರಾಜ್ 6 ರನ್, ಲುಥೋ ಸಿಪಾಮ್ಲಾ ರನ್ಗಳಿಸಿದರು.
ಭಾರತದ ಪರ ಅರ್ಶದೀಪ್ ಸಿಂಗ್ 20ಕ್ಕೆ 3, ವರುಣ್ ಚಕ್ರವರ್ತಿ 42ಕ್ಕೆ 2, ಅಕ್ಷರ್ ಪಟೇಲ್ 6ಕ್ಕೆ 2 ವಿಕೆಟ್ ಹಾಗೂ ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ ರಮಣ್ದೀಪ್ ಸಿಂಗ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಸರಣಿ ನಿರ್ಧರಿಸುವ ಪಂದ್ಯದಲ್ಲಿ ಭಾರತ ತಂಡ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿತು. ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಸಿಡಿಸಿದ ಸಿಡಿಲಬ್ಬರದ ಶತಕಗಳ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 283 ರನ್ಗಳಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಯಾವುದೇ ತಂಡ ಸಿಡಿಸಿದ ವಿಶ್ವದಾಖಲೆಯ ಮೊತ್ತವಾಗಿದೆ.
ದಾಖಲೆಯ ಜೊತೆಯಾಟ
ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಭಾರತ ಮೊದಲ ವಿಕೆಟ್ಗೆ 73 ರನ್ ಸೇರಿಸಿತು. 2 ಮತ್ತು 3ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಸಂಜು ಸ್ಯಾಮ್ಸನ್ ಇಂದು ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಮೊದಲ ವಿಕೆಟ್ಗೆ ಅಭಿಷೇಕ್ ಶರ್ಮಾ ಜೊತೆ 73 ರನ್ಗಳ ಜೊತೆಯಾಟ ನೀಡಿದರು. ಅಭಿಷೇಕ್ ಶರ್ಮಾ 18 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 36 ರನ್ ಸಿಡಿಸಿ ಔಟಾದರು.
ಆದರೆ 2ನೇ ವಿಕೆಟ್ಗೆ ಒಂದಾದ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ದಾಖಲೆಯ 210 ರನ್ಗಳ ಜೊತೆಯಾಟ ನೀಡಿದರು. ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ 6 ಬೌಂಡರಿ, 9 ಸಿಕ್ಸರ್ ಸಹಿತ ಅಜೇಯ 109ರನ್ ಸಿಡಿಸಿದರೆ, ತಿಲಕ್ ವರ್ಮಾ 47 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್ಗಳ ನೆರವಿನಿಂದ ಅಜೇಯ 120 ರನ್ಗಳಿಸಿದರು. ಇವರಿಬ್ಬರ ಜೊತೆಯಾಟ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡದ ಗರಿಷ್ಠ ಜೊತೆಯಾಟವಾಗಿದೆ.
Views: 0