Perth Match: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯಕ್ಕೂ ಮುನ್ನ ಪರ್ತ್ನಲ್ಲಿ ಅಂಪೈರ್ ಟೋನಿ ಡಿ ನೊಬ್ರೆಗಾ ಅವರಿಗೆ ಚೆಂಡು ಬಡಿದು ಗಂಭೀರ ಗಾಯವಾಗಿದೆ. ಮೂರನೇ ದರ್ಜೆ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಮೂಳೆ ಮುರಿತವಿಲ್ಲ ಎಂದು ವರದಿಯಾಗಿದೆ.

ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾದ ಪರ್ತ್ನಲ್ಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯವು ಪರ್ತ್ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ಆಪ್ಟಸ್ ಕ್ರೀಡಾಂಗಣದಲ್ಲಿ ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ. ಈ ಸರಣಿಗಾಗಿ ಕ್ರಿಕೆಟ್ ಪ್ರೇಮಿಗಳೂ ಕೂಡ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನವೇ ಪರ್ತ್ನಲ್ಲಿ ಭಾರೀ ಅವಘಡವೊಂದು ನಡೆದಿದ್ದು, ಲೈವ್ ಮ್ಯಾಚ್ನಲ್ಲಿ ಅಂಪೈರ್ ಮುಖಕ್ಕೆ ಬಾಲ್ ಬಡಿದ ಕಾರಣ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪರ್ತ್ ಟೆಸ್ಟ್ಗೂ ಮುನ್ನ ಅವಘಡ
ವಾಸ್ತವವಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಪರ್ತ್ನಲ್ಲಿ ನಡೆದ ಮೂರನೇ ದರ್ಜೆ ಕ್ರಿಕೆಟ್ ಪಂದ್ಯದ ವೇಳೆ ಈ ಅಪಾಯಕಾರಿ ಅಪಘಾತ ಸಂಭವಿಸಿದೆ. ವಾಸ್ತವವಾಗಿ, ಅಂಪೈರ್ ಟೋನಿ ಡಿ ನೊಬ್ರೆಗಾ ಅವರ ಮುಖಕ್ಕೆ ರಬಸವಾಗಿ ಬಂದ ಚೆಂಡು ಬಡಿದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ, ಡಿ ನೊಬ್ರೆಗಾ ಮೈದಾನದಲ್ಲಿ ಚಿಕಿತ್ಸೆ ನೀಡಲಾಯಿತು. ಇದರಿಂದಾಗಿ ಆಟವನ್ನು ಸಹ ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ಇದರ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಮಾಧಾನಕರ ಸಂಗತಿಯೆಂದರೆ ಡಿ ನೊಬ್ರೆಗಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದರೂ, ಅವರ ಮುಖದಲ್ಲಿ ಯಾವುದೇ ಮೂಳೆ ಮುರಿತವಾಗಿಲ್ಲ. ಪ್ರಸ್ತುತ ಅವರು ಆಸ್ಪತ್ರೆಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಶಸ್ತ್ರಚಿಕಿತ್ಸೆಯ ಸಾಧ್ಯತೆ
ಇನ್ನು ಅಂಪೈರ್ ಟೋನಿ ಡಿ ನೊಬ್ರೆಗಾ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವೆಸ್ಟರ್ನ್ ಆಸ್ಟ್ರೇಲಿಯನ್ ಸಬರ್ಬನ್ ಟರ್ಫ್ ಕ್ರಿಕೆಟ್ ಅಂಪೈರ್ಸ್ ಅಸೋಸಿಯೇಷನ್, ‘ ಅಂಪೈರ್ ಟೋನಿ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಅದೃಷ್ಟವಶಾತ್ ಯಾವುದೇ ಮೂಳೆ ಮುರಿತವಾಗಿಲ್ಲ. ಆದರೂ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಆದಾಗ್ಯೂ ಶಸ್ತ್ರಚಿಕಿತ್ಸೆಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈ ಭಯಾನಕ ಘಟನೆಯಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ನಾವು ಟೋನಿ ಅವರಿಗೆ ಶುಭ ಹಾರೈಸುತ್ತೇವೆ ಮತ್ತು ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದಿದೆ.
ವಾಸ್ತವವಾಗಿ ಚೆಂಡು ಬಡಿದು ಇಂಜುರಿಗೊಳಗಾದವರ ಪಟ್ಟಿಯಲ್ಲಿ ಟೋನಿ ಡಿ ನೊಬ್ರೆಗಾ ಮೊದಲಿನವರಲ್ಲ. ಇದಕ್ಕೂ ಮೊದಲು ಕ್ರಿಕೆಟ್ ಮೈದಾನದಲ್ಲಿ ಇಂತಹ ಘಟನೆಗಳು ಸಾಕಷ್ಟು ಬಾರಿ ಕಂಡುಬಂದಿವೆ. ಹೀಗಾಗಿ ಅಂಪೈರ್ಗಳ ಸುರಕ್ಷತೆಯ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಎದ್ದಿವೆ. ಈ ಕಾರಣದಿಂದಾಗಿ, ಇಂದು ಕೆಲವು ಅಂಪೈರ್ಗಳು ತಮ್ಮ ಕೈಯಲ್ಲಿ ರಕ್ಷ ಕವಚನ್ನು ಧರಿಸಿರುತ್ತಾರೆ. ಇದರಿಂದ ಈ ರೀತಿಯ ಅವಘಡಗಳಿಂದ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.