
ಚಿತ್ರದುರ್ಗ/ಹಿರೇಗುಂಟನೂರು, ಡಿ.03 :”ಸರಿಯಾದ ಹಾದಿಯನ್ನು ಹಿಡಿಯಿರಿ; ನನ್ನ ಆರೋಗ್ಯ, ನನ್ನ ಹಕ್ಕು “ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿರುವ 2024ರ ವಿಶ್ವ ಏಡ್ಸ್ ದಿನಾಚರಣೆ ನಿಜಕ್ಕೂ ಅರ್ಥಪೂರ್ಣವಾಗಿದೆ ಕೆಟ್ಟ ಅಭ್ಯಾಸವನ್ನು ಉತ್ತಮ ಅಭ್ಯಾಸದೊಂದಿಗೆ ಬದಲಾಯಿಸಲು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ ನಿಮ್ಮ ಒಳ್ಳೆಯ ಮತ್ತು ಸರಿಯಾದ ಆರೋಗ್ಯವಂತ ಹಾದಿಯನ್ನು ಹಿಡಿಯಲು ಆರೋಗ್ಯ ಇಲಾಖೆ ಸದಾ ನಿಮಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತದೆ ಏಡ್ಸ್ ರೋಗಿಗಳು ಈಗ ಭಯಪಡುವ ಅಗತ್ಯವಿಲ್ಲ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಉತ್ತಮ ಜೀವನ ನಡೆಸಬಹುದು”ಎಂದು ಹಿರೇಗುಂಟಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಜಯಶ್ರೀ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ದಿನದ ಅಂಗವಾಗಿ ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಗ್ರಾಮದ ಸರ್ಕಾರಿ ಪ್ರಾಥಮಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಎಚ್ಐವಿ ಯೊಂದಿಗೆ ವಾಸಿಸುವ ಜನರು ಕಳಂಕ ಅಥವಾ ಸಮಾಜದಲ್ಲಿ ತಾರತಮ್ಯವನ್ನು ಎದುರಿಸುತ್ತಿರುವ ಏಡ್ಸ್ ರೋಗಿಗಳಿಗೆ ಮಾನಸಿಕ ಬೆಂಬಲ ನೀಡುವ ಸಲುವಾಗಿ ಹಾಗೂ ವಿಶ್ವದಾದ್ಯಂತ ಏಡ್ಸ್ ತಡೆಗಟ್ಟುವ ಕ್ರಮಗಳು, ಚಿಕಿತ್ಸೆ ನೀಡುವುದು ಹಾಗೂ ಆರೈಕೆಯ ಮಹತ್ವದ ಬಗ್ಗೆ ಪ್ರತಿಪಾದಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ ಒಂದನೇ ತಾರೀಕು ವಿಶ್ವ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಶ್ರೀಮತಿ ಶಾಂತಮ್ಮ, ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಪುಟ್ಟು ಸ್ವಾಮಿ, ನಾಗರಾಜ್, ಅಜಯಕುಮಾರ್ , ಯೋಗಗುರು ರವಿ ಕೆ. ಅಂಬೇಕರ್, ಆರೋಗ್ಯ ಸುರಕ್ಷಣಾಧಿಕಾರಿಗಳಾದ ಗಂಗಮ್ಮ ಪರ್ವೀನ್,ಸುಶೀಲಮ್ಮ, ವೀರಮ್ಮ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಪ್ರಿಯಾ, ಪುನೀತ್ ಇನ್ನಿತರರು ಭಾಗವಹಿಸಿದ್ದರು