IND vs PAK: ಪಾಕಿಸ್ತಾನವನ್ನು ಮಣಿಸಿ ಜೂನಿಯರ್ ಏಷ್ಯಾಕಪ್ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡ.

ಒಮಾನ್‌ ಮಸ್ಕತ್​ನಲ್ಲಿ ನಡೆದ ಪುರುಷರ ಜೂನಿಯರ್ ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವು 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಅತ್ಯಂತ ಬಲಿಷ್ಠವಾಗಿತ್ತು. ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲಲದೆ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಇತ್ತ ಪಾಕಿಸ್ತಾನ ಕೂಡ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿತ್ತು. ಹೀಗಾಗಿ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಲಾಗಿತ್ತು. ಆದರೆ ಭಾರತದ ಆಕ್ರಮಣಕಾರಿ ಆಟದ ಮುಂದೆ ಪಾಕ್ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ.

ಎರಡೂ ತಂಡಗಳಿಂದ ಸಮಬಲದ ಹೋರಾಟ

ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಪಂದ್ಯದ ಆರಂಭದಲ್ಲೇ ಪಾಕಿಸ್ತಾನ ಗೋಲು ಗಳಿಸುವ ಮೂಲಕ 1-0 ಮುನ್ನಡೆ ಸಾಧಿಸಿತು. ಆದರೆ ನಾಲ್ಕನೇ ನಿಮಿಷದಲ್ಲಿ ಭಾರತ ಗೋಲು ದಾಖಲಿಸಿ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. ಭಾರತದ ಪರ ಅರ್ಜಿತ್ ಸಿಂಗ್ ಹುಂಡಾಲ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ಇದರಿಂದಾಗಿ ಮೊದಲ ಕ್ವಾರ್ಟರ್ ಡ್ರಾದಲ್ಲಿ ಕೊನೆಗೊಂಡಿತು.

ಎರಡನೇ ಕ್ವಾರ್ಟರ್‌ನಲ್ಲಿ 18ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮತ್ತೊಮ್ಮೆ ಗೋಲಾಗಿ ಪರಿವರ್ತಿಸಿದ ಭಾರತದ ಅರಿಜಿತ್ ಸಿಂಗ್ ಹುಂಡಾಲ್ ತಂಡಕ್ಕೆ 2-1ರ ಮುನ್ನಡೆ ತಂದುಕೊಟ್ಟರು. ದಿಲ್ರಾಜ್ ಸಿಂಗ್ ಅದ್ಭುತ ಫೀಲ್ಡ್ ಗೋಲು ಗಳಿಸಿದರು. ಆದರೆ ಎರಡನೇ ಕ್ವಾರ್ಟರ್‌ನ ಅಂತ್ಯದ ವೇಳೆಗೆ, ಪಾಕಿಸ್ತಾನವು ಪುನರಾಗಮನವನ್ನು ಮಾಡಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಮೊದಲಾರ್ಧವನ್ನು 3-2 ಅಂತರದೊಂದಿಗೆ ಕೊನೆಗೊಳಿಸಿದರು.

ದ್ವಿತೀಯಾರ್ಧದಲ್ಲಿ ಪ್ರಬಲ ಪೈಪೋಟಿ

ಪಂದ್ಯದ ಮೂರನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನ ತನ್ನ ಮೂರನೇ ಗೋಲು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಪಾಕಿಸ್ತಾನ ಪಂದ್ಯವನ್ನು 3-3 ರಲ್ಲಿ ಸಮಬಲಗೊಳಿಸಿತು. ಇತ್ತ ಭಾರತದಿಂದ ಈ ಕ್ವಾರ್ಟರ್​ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ತಂಡ ಆರಂಭದಲ್ಲೇ ಗೋಲು ದಾಖಲಿಸಿತು. ಪಂದ್ಯದಲ್ಲಿ ಅರಿಜಿತ್ ಸಿಂಗ್ ಹುಂದಾಲ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ 4-3 ರ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಕೊನೆಯ ಕ್ವಾರ್ಟರ್ ನಲ್ಲಿ ಭಾರತ ಮತ್ತೊಂದು ಗೋಲು ದಾಖಲಿಸಿ ಮುನ್ನಡೆಯನ್ನು 5-3ಕ್ಕೆ ಹೆಚ್ಚಿಸಿಕೊಂಡಿತು.

ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ

2024 ರ ಪುರುಷರ ಜೂನಿಯರ್ ಏಷ್ಯಾಕಪ್​ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 11-0 ಅಂತರದಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸಿತು. ಇದರ ನಂತರ ಜಪಾನ್ ತಂಡವನ್ನು 3-2 ಅಂತರದಿಂದ ಮತ್ತು ಚೈನೀಸ್ ತೈಪೆಯ ತಂಡವನ್ನು 16-0 ಅಂತರದಿಂದ ಸೋಲಿಸಿತು. ಅಲ್ಲದೆ ಕೊರಿಯಾ ವಿರುದ್ಧ 8-1 ಅಂತರದಿಂದ ಜಯ ಸಾಧಿಸಿತ್ತು. ಆ ಬಳಿಕ ನಡೆದ ಸೆಮಿಫೈನಲ್‌ನಲ್ಲಿ ಭಾರತ, ಮಲೇಷ್ಯಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

Source : https://tv9kannada.com/sports/india-wins-junior-asia-cup-hockey-psr-945011.html

Leave a Reply

Your email address will not be published. Required fields are marked *